ರಾಹುಲ್‌ ಗಾಂಧಿಯವರೇ.. ಭಾರತ್‌ ಜೋಡೋ ದೇಶ ಒಡೆದ ಕೃತ್ಯಕ್ಕೆ ಪ್ರಾಯಶ್ಚಿತವಾ? ರವಿಕುಮಾರ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು
ಕಾಂಗ್ರೆಸ್ ದೇಶದ್ರೋಹಿಗಳ ಮತ್ತು ಭ್ರಷ್ಟಾಚಾರಿಗಳ ಪಕ್ಷ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ರಾಹುಲ್ ಗಾಂಧಿಯವರು ಕರ್ನಾಟಕ ಸರಕಾರವನ್ನು 40 ಶೇಕಡಾ ಕಮಿಷನ್ ಸರಕಾರ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಇಂತಹ ಮಾತುಗಳನ್ನಾಡಿದ ಮೇಲೆ ಇದಕ್ಕೆ ಆಧಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರ ಅನುಭವಿಸಿದ 75 ವರ್ಷಗಳ ಬಳಿಕ ಭಾರತವನ್ನು ಜೋಡಿಸುವ ಒಳ್ಳೆಯ ಕೆಲಸಕ್ಕೆ ಹೊರಟಿರುವ ರಾಹುಲ್ ಗಾಂಧಿಯವರೇ ನಿಮ್ಮ ಪಾದಯಾತ್ರೆ ಈ ಹಿಂದೆ ಮಾಡಿದ ಪಾಪಕ್ಕೆ ಪ್ರಾಯಶ್ಚಿತವಾ..? ಎಂದು ರವಿಕುಮಾರ್‌ ಪ್ರಶ್ನಿಸಿದ್ದಾರೆ. ನಿಮ್ಮ ಕುಟುಂಬ ಪಕ್ಷ 1947ರಲ್ಲಿ ದೇಶವನ್ನು ವಿಭಜಿಸಿದ್ದಕ್ಕೆ ,ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದಕ್ಕೆ, ಹಿಂದುಗಳಿಗೆ ಹಿಂದೂಸ್ತಾನವನ್ನು ಸೂಕ್ತವಾಗಿ ನೀಡದೆ ಇದ್ದಿದ್ದಕ್ಕೆ, ನೀವೀಗ ದೇಶಭಂಜನೆಯ ಪಾಪಕ್ಕಾಗಿ ಪ್ರಾಯಶ್ಚಿತ್ತಕ್ಕೆ ಪಾದಯಾತ್ರೆ ಮಾಡುತ್ತಿರುವಿರಾ ಎಂದು ಕೇಳಿದ್ದಾರೆ.
1919ರ ಖಿಲಾಫತ್ ಚಳುವಳಿಯಿಂದ ಹಿಡಿದು ಬಾರತ-ಪಾಕಿಸ್ತಾನ, ಭಾರತ-ಬಾಂಗ್ಲಾ, ಕಾಶ್ಮೀರಕ್ಕೆ 370ನೇ ವಿಧಿ, ವಂದೇ ಮಾತರಂ ವಿಭಜನೆ, ಮೊನ್ನೆ ಮೊನ್ನೆಯ ಸಿಎಎ ಕಾಯಿದೆಯವರೆಗೆ ನಿಮ್ಮದು ಹಿಂದೂಗಳನ್ನು ಅನಾಥರನ್ನಾಗಿಸುವ ನೀತಿ. ಈಗ ಜೋಡೋ ಯಾತ್ರೆಯ ಮೂಲಕ ಏನನ್ನು ಜೋಡಿಸಲು ಹೊರಟಿದ್ದೀರಿ ಎಂದು  ಪ್ರಶ್ನಿಸಿದ್ದಾರೆ.
1947ರಲ್ಲಿ ಅಧಿಕಾರ ಸಿಕ್ಕೊಡನೆ ದಲಿತರನ್ನು, ದೇಶದ ಗಡಿಯಲ್ಲಿನ ಹಿಂದುಗಳನ್ನು ಕಡೆಗಣಿಸಿದಿರಿ. ಮುಸ್ಲಿಂ ಲೀಗ್‌, ಕಮ್ಯುನಿಸ್ಟ್ ರೊಂದಿಗೆ ಅಧಿಕಾರ ಹಂಚಿಕೊಂಡು ನಿಮ್ಮ ಪಕ್ಷ ದೇಶವನ್ನು ಲೂಟಿ ಮಾಡಿದೆ. ಒಳಗೆ ಭಾರತ ತೋಡೋ, ಹೊರಗೆ ಭಾರತ ಜೋಡೋ ಎಂಬ ವಿಚಾರಧಾರೆಯನ್ನು ಇಟ್ಟುಕೊಂಡು ಏಕೆ ಆತ್ಮವಂಚನೆ ನಡೆಸುತ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ನಿಮ್ಮದೇ ಪಕ್ಷದ ಡಿ.ಕೆ.ಶಿವಕುಮಾರ್- ಸಿದ್ಧರಾಮಯ್ಯ ಅವರನ್ನು ಜೋಡಿಸಲಾಗದ ನಿಮಗೆ ಭಾರತವನ್ನು ಜೋಡಿಸಲು ಸಾಧ್ಯವೇ?. ಕಪಿಲ್ ಸಿಬಲ್ ,ಗುಲಾಂ ನಬಿ ಆಜಾದ್, ಕರ್ನಾಟಕದ ಸಿ.ಎಂ.ಇಬ್ರಾಹಿಂ ವರೆಗೆ ನಿರಂತರವಾಗಿ ಪ್ರತಿ ರಾಜ್ಯದಲ್ಲಿ ನಿಮ್ಮ ನಾಯಕರುಗಳಿಂದ ಕಾಂಗ್ರೆಸ್  ಛೋಡೋ ನಡೆಯುತ್ತಿದೆ. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಸೋತಿದೆ. ಅದು ನಿಮ್ಮದೇ ಪಕ್ಷದನಾಯಕರಿಗೆ ಕಾಂಗ್ರೆಸ್ ಛೋಡೋ ಎಂದಂತೆ ಕೇಳಿಸುತ್ತಿದೆ ಎಂದು ರವಿಕುಮಾರ್‌ ಕಟಕಿಯಾಡಿದ್ದಾರೆ.
370ನೆ ವಿಧಿ ತೆಗೆದಿದ್ದನ್ನು, ಸಿಎಎ ಕಾನೂನು ತಂದದ್ದನ್ನು ವಿರೋಧಿಸುವಿರಿ, ಸೈನ್ಯದ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಿರಿ, ಕಾಶ್ಮೀರದ ಹಿಂದುಗಳ ಹತ್ಯೆಗಳನ್ನು ಕಡೆಗಣಿಸ್ತೀರಿ, ಒಳಗೊಳಗೇ ಭಯೋತ್ಪಾದಕರನ್ನು ಬೆಂಬಲಿಸ್ತೀರಿ, ದೇಶದಲ್ಲಿ ಹಿಂದುಗಳ ಹತ್ಯೆಯಾದಾಗ ಮೌನವಾಗಿ ಸಂಭ್ರಮಿಸ್ತೀರಿ, ಮೋದಿ ಅವರನ್ನು ವಿರೋಧಿಸುವುದಕ್ಕಾಗಿ ದೇಶವನ್ನೇ ವಿರೋಧಿಸುವ ದೇಶದ್ರೋಹದ ಮಟ್ಟಕ್ಕೂ ಇಳಿಯುತ್ತೀರಿ ಬಾಯಲ್ಲಿ ಮಾತ್ರ ಭಾರತಜೋಡೋ ಎನ್ನುತ್ತೀರಿ. ಎದೆಯಲ್ಲಿ ಭಾರತ ಭಂಜಕರಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಶ್ಮೀರದಲ್ಲಿ ಪಂಡಿತರನ್ನು ನಿರಾಶ್ರಿತರನ್ನಾಗಿ ಮಾಡಿದಿರಿ. ಸುಮಾರು 48 ಲಕ್ಷ ಹಿಂದೂಗಳ ಹತ್ಯೆ ಆಗಿದೆ. ಇದರ ಬಗ್ಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!