ಸೋನಿಯಾ ಗಾಂಧಿ ಬಂಗಲೆಯಿಂದ ಶೀಲಾ ದೀಕ್ಷಿತ್ ಮನೆಗೆ ರಾಹುಲ್ ಗಾಂಧಿ ಸ್ಥಳಾಂತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರಿ ಅಧಿಕೃತ ಬಂಗಲೆ ತೆರವುಗೊಳಿಸಿದ್ದ ಬಳಿಕ ತಾಯಿ ಸೋನಿಯಾ ಗಾಂಧಿ ಮನೆಗೆ ತೆರಳಿದ್ದರು. ಇದೀಗ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಬಂಗಲೆಯಿಂದ, ದೆಹಲಿ ಮಾಜಿ ಸಿಎಂ, ದಿವಂಗತ ಶೀಲಾ ದೀಕ್ಷಿತ್ ಮನೆಗೆ ಸ್ಥಳಾಂತರವಾಗಲು ನಿರ್ಧರಿಸಿದ್ದಾರೆ.

ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪೂರ್ವದ ಬಿ2ನಲ್ಲಿರುವ ಶೀಲಾ ದೀಕ್ಷಿತ್ ಅವರ ಬಂಗಲೆಗೆ ಸ್ಥಳಾಂತರವಾಗಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ದೆಹಲಿಯ ಸಿಎಂ ಆಗಿ, ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 2019ರ ಜುಲೈ 20 ರಂದು ಶೀಲಾ ದೀಕ್ಷೀತ್ ನಿಧನರಾಗಿದ್ದಾರೆ.ಸದ್ಯ ಈ ಮನೆಯಲ್ಲಿ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ವಾಸವಾಗಿದ್ದಾರೆ. ಆದರೆ ಸಂದೀಪ್ ದೀಕ್ಷಿತ್ ಸದ್ಯದಲ್ಲೇ ತಮ್ಮ ಕುಟುಂಬಸ್ಥರ ಮನೆಗೆ ಸ್ಥಳಾಂತರವಾಗುತ್ತಿದ್ದಾರೆ. ಹೀಗಾಗಿ ಖಾಲಿಯಾಗುವ ಶೀಲಾ ದೀಕ್ಷಿತ್ ಮನೆಗೆ ರಾಹುಲ್ ಗಾಂಧಿ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ.

ಮೋದಿ ಸರ್‌ನೇಮ್ ಟೀಕಿಸಿದ ಕ್ರಿಮಿನಲ್‌ ಪ್ರಕರಣದಲ್ಲಿ ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಸಂಸದನಿಗೆ ನೀಡಿದ್ದ ಅಧಿಕೃತ ಸರ್ಕಾರಿ ಬಂಗಲೆಯನ್ನು ಏ.22ರೊಳಗೆ ಖಾಲಿ ಮಾಡಿ ಎಂದು ಸರ್ಕಾರ ರಾಹುಲ್‌ಗೆ ಸೂಚಿಸಿತ್ತು. ಸರ್ಕಾರದ ಆದೇಶದಂತೆ ಮನೆ ಖಾಲಿ ಮಾಡಿದ ರಾಹುಲ್ ಗಾಂಧಿ ಅಧಿಕಾರಿಗಳಿಗೆ ಕೀ ಹಸ್ತಾಂತರಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!