ಇವಿಎಂ ಫಿಕ್ಸಿಂಗ್ ಎಂದ ರಾಹುಲ್ ಗಾಂಧಿ: ಆಯೋಗಕ್ಕೆ ಬಿಜೆಪಿ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇವಿಎಂ (EVM) ಇಲ್ಲದೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಭಾಷಣ ಮಾಡಿದ ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.

ಬಿಜೆಪಿ ಹಿರಿಯ ನಾಯಕ ಹರ್ದೀಪ್ ಸಿಂಗ್ ಪುರಿ (Hardeep Singh Puri) ನೇತೃತ್ವದ ನಿಯೋಗ ದೇಶ ವಿರೋಧಿ ಹೇಳಿಕೆ ಎಂದು ವ್ಯಾಖ್ಯಾನಿಸಿ ದೂರು ನೀಡಿದೆ.

ಸಿಎಂ ಅರವಿಂದ್ ಕೇಜ್ರಿವಾಲ್ ಇಡಿ ಬಂಧನ ಖಂಡಿಸಿ ಭಾನುವಾರ ಇಂಡಿಯಾ ಒಕ್ಕೂಟ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಐಪಿಎಲ್ ನಡೆಯುವಂತೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ. ಪಂದ್ಯ ಆರಂಭಕ್ಕೂ ಮುನ್ನ ನಮ್ಮ ಆಟಗಾರರನ್ನು ಬಂಧಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಬಿಜೆಪಿ 400 ಪಾರ್ ಘೋಷಣೆ ಸಾಧ್ಯವಿಲ್ಲ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ‘ಅಂಪೈರ್’ಗಳನ್ನು ಆಯ್ಕೆ ಮಾಡಿದ್ದಾರೆ. ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ಸಾಮಾಜಿಕ ಮಾಧ್ಯಮಗಳು ಮತ್ತು ಮಾಧ್ಯಮ ಸಹಕಾರವಿಲ್ಲದೇ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 180ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ. ಬಿಜೆಪಿಯ ಮ್ಯಾಚ್ ಫಿಕ್ಸಿಂಗ್ ಯಶಸ್ವಿಯಾದರೆ ಸಂವಿಧಾನ ಇರುವುದಿಲ್ಲ. ಸಂವಿಧಾನ ಇಲ್ಲದಿದ್ದರೆ ದೇಶವಿಲ್ಲ. ಬಿಜೆಪಿ ಅಧಿಕಾರದಲ್ಲಿ ನಾವು ಎಲ್ಲೆಡೆ ಬೆಂಕಿ ಕಾಣಬಹುದು ಎಂದು ಆರೋಪಿಸಿದ್ದರು.

ಈ ಹೇಳಿಕೆ ವಿರುದ್ಧ ಬಿಜೆಪಿ ದೂರು ನೀಡಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, ರಾಹುಲ್ ಗಾಂಧಿ ಅವರು ಗಂಭೀರವಾದ ಪರಿಣಾಮಗಳೊಂದಿಗೆ ಆಕ್ಷೇಪಾರ್ಹವಾದ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಸಂವಿಧಾನ ಬದಲಾಯಿಸುವುದಾಗಿ ಯಾವ ಕಾರ್ಯಕರ್ತ ಹೇಳಿದ್ದಾರೋ ನಮಗೆ ಗೊತ್ತಿಲ್ಲ. ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ಚಿತ್ರವನ್ನು ಎಕ್ಸ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಅತ್ಯಾಚಾರಿಗಳನ್ನು ರಕ್ಷಿಸಲು ಪ್ರಾಣ ಕೊಡುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಇವಿಎಂ, ಮ್ಯಾಚ್ ಫಿಕ್ಸಿಂಗ್‌ನಂತಹ ಪದಗಳನ್ನು ಬಳಸುವ ಮೂಲಕ ದೇಶದ್ರೋಹದ ರೀತಿಯ ಹೇಳಿಕೆ ನೀಡಿದ್ದು, ಕೀಳುಮಟ್ಟದ ರಾಜಕೀಯ ಭಾಷಣ ಅವರ ಹತಾಶೆಯನ್ನು ತೋರುತ್ತಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ರಾಹುಲ್ ಗಾಂಧಿಗೆ ಕೇವಲ ನೋಟಿಸ್ ನೀಡಿದರೆ ಸಾಕಾಗುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!