ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಲು ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂದು ಪರಿಗಣಿಸುವುದಾಗಿ ಹೈಕೋರ್ಟ್ ಮಂಗಳವಾರ ಹೇಳಿದೆ.
ವಿಚಾರಣೆ ಸಮಯದಲ್ಲಿ ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠವು ಸುಬ್ರಮಣಿಯನ್ ಸ್ವಾಮಿ ಅವರು ರಿಟ್ ನಿರ್ದೇಶನಗಳನ್ನು ನೀಡಲು ನ್ಯಾಯಾಲಯವು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕುಗಳನ್ನು ತೋರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದೆ. ಆದರೆ ಈ ವಿಷಯವು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವುದರಿಂದ ಅರ್ಜಿಯ ಸ್ವರೂಪವನ್ನು ಸಾರ್ವಜನಿಕ ಹಿತಾಸಕ್ತಿ ವಿಷಯವಾಗಿ ಮಾತ್ರ ಸಮರ್ಥಿಸಬಹುದು ಎಂದು ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್ ಸ್ವಾಮಿ, ನ್ಯಾಯಾಲಯವು ಸೂಕ್ತವೆಂದು ಪರಿಗಣಿಸಿದರೆ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ವಿಶೇಷ ಪೀಠಕ್ಕೆ ವರ್ಗಾಹಿಸಬಹುದು ಎಂದು ಹೇಳಿದರು. ತಮ್ಮ ಕ್ರಮಗಳು ವೈಯಕ್ತಿಕ ಲಾಭಕ್ಕಾಗಿ ಅಲ್ಲ, ರಾಷ್ಟ್ರೀಯ ಕಾಳಜಿಯ ವಿಷಯ ಎಂದು ತಿಳಿಸಿದರು.
ಬ್ರಿಟನ್ನಲ್ಲಿ ನೋಂದಾಯಿಸಲಾದ ಬ್ಯಾಕ್ಆಪ್ಸ್ ಲಿಮಿಟೆಡ್ ಹೆಸರಿನ ಸಂಸ್ಥೆಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ರಾಹುಲ್ಗಾಂಧಿ ಕೂಡ ಒಬ್ಬರು. ಸಂಸ್ಥೆಯು 2005 ಅಕ್ಟೋಬರ್ 10 ಮತ್ತು 2006 ಅಕ್ಟೋಬರ್ 31ರಂದು ಸಲ್ಲಿಸಿದ ವಾರ್ಷಿಕ ರಿಟರ್ನ್ಸ್ನಲ್ಲಿ ರಾಹುಲ್ ಗಾಂಧಿ ಅವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷರು ಎಂದು ಉಲ್ಲೇಖಿಸಿದ್ದಾರೆ. 2009 ಫೆಬ್ರವರಿ 17ರಂದು ಬ್ಯಾಕ್ಆಪ್ಸ್ ಲಿಮಿಟೆಡ್ ಕಂಪನಿಯ ವಿಸರ್ಜನೆಯ ಅರ್ಜಿಯಲ್ಲಿಯೂ ಮತ್ತೆ ಬ್ರಿಟಿಷರು ಎಂದು ಉಲ್ಲೇಖಿಸಿದ್ದಾರೆ. ಇದು ಭಾರತದ ಸಂವಿಧಾನದ 9ನೇ ವಿಧಿ ಮತ್ತು ಭಾರತೀಯ ಪೌರತ್ವ ಕಾಯಿದೆ, 1955 ಅನ್ನು ಉಲ್ಲಂಘಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.