ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ 79ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಇಂದು ಲಡಾಖ್‌ನ ಪಾಂಗೊಂಗ್ ಸರೋವರದ ತೀರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಂದೆಗೆ ಪುಷ್ಪ ನಮನ ಸಲ್ಲಿಸಿದರು.
ಅಪ್ಪನ ಜನ್ಮದಿನದಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಅಪ್ಪಾ, ಭಾರತಕ್ಕಾಗಿ ನೀವು ಕಂಡ ಕನಸುಗಳು ಈ ಅಮೂಲ್ಯ ನೆನಪುಗಳಿಂದ ಉಕ್ಕಿ ಹರಿಯುತ್ತವೆ. ಪ್ರತಿಯೊಬ್ಬ ಭಾರತೀಯನ ಹೋರಾಟ ಮತ್ತು ಕನಸುಗಳನ್ನು ಅರ್ಥಮಾಡಿಕೊಳ್ಳುವ, ಭಾರತಮಾತೆಯ ಧ್ವನಿಯನ್ನು ಆಲಿಸುವ ನಿಮ್ಮ ಗುರುತುಗಳೇ ನನಗೆ ದಾರಿ” ಎಂದು ಬರೆದುಕೊಂಡಿದ್ದಾರೆ.
ರಾಜೀವ್ ಗಾಂಧಿ ಆಗಸ್ಟ್ 20, 1944ರಲ್ಲಿ ಜನಿಸಿದರು. ಭಾರತದ 7ನೇ ಪ್ರಧಾನ ಮಂತ್ರಿಯಾಗಿ 1984 ರಿಂದ 1989ರ ವರೆಗೆ ಕಾರ್ಯನಿರ್ವಹಿಸಿದ್ದರು.
ರಾಜೀವ್ ಗಾಂಧಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಹಲವು ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯಲ್ಲಿ ಗೌರವ ಸಲ್ಲಿಸಿದರು. ರಾಜೀವ್ ಗಾಂಧಿ ಸಮಾಧಿ ಇರುವ ವೀರ ಭೂಮಿಯಲ್ಲಿ ಪತ್ನಿ ಸೋನಿಯಾ ಗಾಂಧಿ , ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯಸಭಾ ಸಂಸದ ಕೆ.ಸಿ.ವೇಣುಗೋಪಾಲ್ ಈ ವೇಳೆ ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಗೌರವ ನಮನ ಸಲ್ಲಿಸಿದ್ದು, “ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನನ್ನ ನಮನಗಳು” ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ (ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಶನಿವಾರ ಪಾಂಗೊಂಗ್ ಸರೋವರಕ್ಕೆ ಬೈಕ್‌ನಲ್ಲಿ ಪ್ರಯಾಣ ಬೆಳೆಸಿದ್ದರು. 2019ರಲ್ಲಿ 370 ಮತ್ತು 35 (ಎ) ವಿಧಿ ರದ್ದುಗೊಳಿಸಿದ ಬಳಿಕ ಇದು ಅವರ ಮೊದಲ ಲಡಾಖ್ ಭೇಟಿಯಾಗಿದೆ.