ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿಗಿಂತಲೂ ಹೆಚ್ಚು ಬುದ್ಧಿವಂತರಾಗಿದ್ದಾರೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಬಣ್ಣಿಸಿದ್ದಾರೆ.
ಚಿಕಾಗೋದಿಂದ ಸಂದರ್ಶನದಲ್ಲಿ ಮಾತನಾಡಿರುವ ಸ್ಯಾಮ್ ಪಿತ್ರೋಡಾ ಅವರು, ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಎಲ್ಲಾ ಗುಣಗಳಿವೆ. ಅವರು ತಮ್ಮ ತಂದೆಗಿಂತ ಹೆಚ್ಚು ಬುದ್ಧಿವಂತರು. ಆದರೆ ಅವರನ್ನು ಪ್ರಧಾನಿ ಮಾಡಬೇಕೇ ಬೇಡವೇ ಎಂದು ನಿರ್ಧರಿಸುವುದು ಜನರ ಮೇಲಿದೆ ಎಂದು ಹೇಳಿದ್ದಾರೆ.
ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸಗಳ ಬಗ್ಗೆ ಕೇಳಿದಾಗ, ‘ನನಗೆ ಹಲವು ಪ್ರಧಾನಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಆದರೆ ರಾಹುಲ್ ಗಾಂಧಿ ಮತ್ತು ರಾಜೀವ್ ಗಾಂಧಿ ನಡುವಿನ ವ್ಯತ್ಯಾಸ ಹೇಳುವುದಾದರೆ ಬಹುಶಃ ರಾಹುಲ್ ಹೆಚ್ಚು ಬುದ್ಧಿವಂತ ಮತ್ತು ಉತ್ತಮ ತಂತ್ರಜ್ಞ ಎಂದಿದ್ದಾರೆ.
ರಾಜೀವ್ ಗಾಂಧಿಯವರು ಸಹ ಉತ್ತಮ ಆಡಳಿತ ನೀಡಿದ್ದಾರೆ. ಆತ್ಮವಿಶ್ವಾಸ ಹೆಚ್ಚಿತ್ತು. ದೇಶದ ಜನರಿಗೆ ಉತ್ತಮ ಆಡಳಿತ ನೀಡುವ ಬಗ್ಗೆ ಚಿಂತಿಸುತ್ತಿದ್ದರು. ತಂದೆಯಂತೆ ರಾಹುಲ್ ಗಾಂಧಿಯವರಲ್ಲೂ ಹೆಚ್ಚು ಆತ್ಮವಿಶ್ವಾಸವಿದೆ. ಇಬ್ಬರಿಗೂ ಒಂದೇ ಡಿಎನ್‌ಎ ಇದೆ. ಹೀಗಾಗಿ ದೇಶದ ಜನರ ಬಗ್ಗೆ ಇಬ್ಬರೂ ಬಗ್ಗೆ ಒಂದೇ ರೀತಿಯ ಕಾಳಜಿ ಮತ್ತು ಭಾವನೆಗಳನ್ನು ಹೊಂದಿದ್ದಾರೆ. ಅವರು ಸರಳವಾಗಿದ್ದಾರೆ. ಯಾವುದೇ ದೊಡ್ಡ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ರಾಜೀವ್ ಗಾಂಧಿ ಇಬ್ಬರೂ ಬೇರೆ ಬೇರೆ ಕಾಲಘಟ್ಟದ ನಾಯಕರು. ಇಬ್ಬರೂ ವಿಭಿನ್ನ ಸಮಸ್ಯೆಗಳನ್ನು ಎದುರಿಸಿದ್ದಾರೆ. ಹೀಗಾಗಿ ಇಬ್ಬರ ಅನುಭವಗಳು ಸಹ ವಿಭಿನ್ನವಾಗಿವೆ. ಆದರೆ ರಾಹುಲ್ ಗಾಂಧಿ ಚಿಕ್ಕವಯಸ್ಸಿನಲ್ಲೇ ದೊಡ್ಡ ಆಘಾತಗಳು ಎದುರಾದವು. ಚಿಕ್ಕ ವಯಸ್ಸಿನಲ್ಲಿ ಅಜ್ಜಿ ಇಂದಿರಾ ಗಾಂಧಿ ಹತ್ಯೆ, ತಂದೆಯ ಸಾವು ಕಣ್ಮುಂದೆ ನಡೆದವು ಎಲ್ಲ ಸವಾಲುಗಳು ಮೆಟ್ಟಿನಿಂತು ಬೆಳೆದಿದ್ದಾರೆ. ಹಾಗೆ ನೋಡಿದರೆ ರಾಹುಲ್ ಮತ್ತು ರಾಜೀವ್ ಇಬ್ಬರಲ್ಲೂ ಅವರ ತತ್ವಗಳು ಬಹಳ ಸ್ಪಷ್ಟವಾಗಿವೆ. ಇಬ್ಬರೂ ಕಾಂಗ್ರೆಸ್ ಕಲ್ಪಿಸಿದ ಮತ್ತು ಪಕ್ಷದ ಪ್ರತಿಯೊಬ್ಬರೂ ನಂಬಿರುವ ಭಾರತದ ಪರಿಕಲ್ಪನೆಯ ರಕ್ಷಕರಾಗಿದ್ದಾರೆ ಎಂದಿದ್ದಾರೆ.
ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಬೇಕೇ ಬೇಡವೇ ದೇಶದ ಜನರು ನಿರ್ಧರಿಸಬೇಕು. ನನ್ನ ವೈಯಕ್ತಿಕ ಅನುಭವದಿಂದ ನಾನು ಪಕ್ಷಪಾತಿಯಾಗಿರಬಹುದು ಆದರೆ ಅವನು(ರಾಹುಲ್ ಗಾಂಧಿ) ತುಂಬಾ ಸಭ್ಯ, ಸರಳ ವ್ಯಕ್ತಿಯಾಗಿದ್ದಾನೆ ಎಂದರು.
ಖಂಡಿತ ಭವಿಷ್ಯದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ. ಪ್ರಧಾನಿಗೆ ಇರಬೇಕಾದ ಎಲ್ಲ ಗುಣಗಳು ಅವರಲ್ಲಿವೆ. ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.