ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಯುವಕರು ಕುಡುಕರು ಎಂಬ ರಾಹುಲ್ ಗಾಂಧಿ ಮಾತುಕೇಳಿ ನನಗೆ ಆಘಾತವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೆ, ಕಾಂಗ್ರೆಸ್ ಕುಟುಂಬದ ರಾಜಕುಮಾರ ಉತ್ತರ ಪ್ರದೇಶದ ಯುವಕರು ‘ನಶೇದಿ’ ಎಂದು ಹೇಳಿದ್ದಾರೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ವಾರಾಣಸಿ ಯುವಕರು ಮದ್ಯಪಾನ ಮಾಡಿ ಬೀದಿ ಬದಿ ಮಲಗಿದ್ದನ್ನು ನಾನು ನೋಡಿದೆ ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಮೋದಿ ಟೀಕಿಸಿದರು.
ಕಾಂಗ್ರೆಸ್‌ನ ಯುವರಾಜರೊಬ್ಬರು ವಾರಾಣಸಿಯ ಮಕ್ಕಳನ್ನು ನಿಂದಿಸಿದ್ದಾರೆ. ವಾರಾಣಸಿ ಯುವಕರನ್ನು ಕುಡುಕರು ಎಂದು ಕರೆದಿದ್ದಾರೆ. ಇದು ಎಂತಹ ಭಾಷೆ? ಪರಿವಾರವಾದಿಗಳು ನನ್ನನ್ನು ಎರಡು ದಶಕಗಳಿಂದಲೂ ಬೈಯುತ್ತಿದ್ದಾರೆ. ಈಗ ಹತಾಶೆಯಲ್ಲಿ ಉತ್ತರ ಪ್ರದೇಶದ ಯುವಕರನ್ನೂ ಬೈಯುತ್ತಿದ್ದಾರೆ. ಉತ್ತರ ಪ್ರದೇಶದ ಯುವಕರಿಗೆ ಇಂಡಿಯಾ ಒಕ್ಕೂಟ ಮಾಡಿದ ಅವಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಪರಿವಾರವಾದ, ತುಷ್ಟೀಕರಣದ ನೀತಿಯ ಪರಿಣಾಮವಾಗಿ ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳವರೆಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು. ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಉತ್ತರ ಪ್ರದೇಶವನ್ನು ಹಾಳು ಮಾಡಿದ್ದವು. ಆದರೆ, ಕಳೆದ 10 ವರ್ಷದಲ್ಲಿ ಉತ್ತರ ಪ್ರದೇಶವು ಸಂಪೂರ್ಣವಾಗಿ ಅಭಿವೃದ್ಧಿಯಾಗಿದೆ. ಯುವಕರು ಸೇರಿ ಎಲ್ಲರೂ ಉದ್ಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಇದುವರೆಗೆ ಪರಿವಾರ ವಾದಿಗಳು ನರೇಂದ್ರ ಮೋದಿಯನ್ನು ತೆಗಳುತ್ತಿದ್ದರು. ಈಗ ಉತ್ತರ ಪ್ರದೇಶದ ನಾಗರಿಕರನ್ನೂ ಪರಿವಾರವಾದಿಗಳು ತೆಗಳುತ್ತಿದ್ದಾರೆ. ಅವರಿಗೆ ಉತ್ತರ ಪ್ರದೇಶದ ಅಭಿವೃದ್ಧಿ ಬೇಕಾಗಿಲ್ಲ. ಕಾಶಿ, ಅಯೋಧ್ಯೆಯ ಮಂದಿರಗಳು ಬೇಕಾಗಿಲ್ಲ. ಹಾಗಾಗಿ, ಅವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಪರಿವಾರವಾದಿಯೊಬ್ಬ ಕಾಶಿ ಹಾಗೂ ಉತ್ತರ ಪ್ರದೇಶದ ಯುವಕರು ನಶೆಯಲ್ಲಿರುತ್ತಾರೆ ಎಂದು ಹತಾಶೆಯಲ್ಲಿ ಹೇಳಿದ್ದಾರೆ. ಇದು ಪ್ರತಿಪಕ್ಷಗಳು, ಪರಿವಾರವಾದಿಗಳ ಮನಸ್ಥಿತಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.