ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರು ಸಮೀಪದ ಶಕ್ತಿನಗರದಲ್ಲಿರುವ ಡಿಎವಿ (ದಯಾನಂದ ಆಂಗ್ಲೋ ವೇದಿಕ್) ಕನ್ನಡ ಮಾಧ್ಯಮ ಶಾಲೆ ಬಂದ್ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಈ ಕ್ರಮಕ್ಕೆ ಕನ್ನಡ ಕ್ರಿಯಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ ಊರಿನವರು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಿಲ್ಲ ಎಂದು ಕಾರಣ ನೀಡಿ ಶಾಲೆ ಬಂದ್ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಶಾಲೆಯಲ್ಲಿ 2012-13ನೇ ಶೈಕ್ಷಣಿಕ ವರ್ಷದವರೆಗೆ ಎಲ್’ಕೆಜಿಯಿಂದ 10ನೇ ತರಗತಿವರೆಗೆ ಒಟ್ಟು 12 ತರಗತಿಗಳು ಕನ್ನಡ ಮಾಧ್ಯಮದಲ್ಲಿದ್ದವು. ಆದರೆ, 2013-14ನೇ ಸಾಲಿನಿಂದ ಕನ್ನಡ ಮಾಧ್ಯಮ ತರಗತಿಗಳನ್ನು ಹಂತಹಂತವಾಗಿ ಮುಚ್ಚುತ್ತಾ ಬರಲಾಗಿದೆ. ಇದೀಗ ಶಾಲೆಯನ್ನೇ ಬಂದ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.