ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ಸರಣಿ ರೈಲು ಅಪಘಾತದ ಬಳಿಕ ಬಹನಾಗ ಬಜಾರ್ ಬಳಿಯ ಘಟನಾ ಸ್ಥಳದಲ್ಲಿನ ಬೋಗಿಗಳನ್ನು ಬಹುತೇಕ ತೆರವುಗೊಳಿಸಲಾಗಿದ್ದು, ಹಳಿಗಳನ್ನು ಪರಿಶೀಲಿಸಿ ಸರಿಪಡಿಸಲಾಗುತ್ತಿದೆ.
ಬುಲ್ಡೋಜರ್, ಕ್ರೇನ್ಗಳನ್ನು ಆಪರೇಟ್ ಮಾಡುವ ಜನರ ತಂಡದೊಂದಿಗೆ ಸೇರಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೋಗಿಗಳು, ಇತರ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಮೇಲೆ ಹಾದು ಹೋಗುವ ಎಲೆಕ್ಟ್ರಿಕ್ ಕೇಬಲ್ಗಳನ್ನೂ ಮರುಸ್ಥಾಪಿಸಲಾಗುತ್ತಿದೆ.
ಈ ಮೂಲಕ ಬಹಂಗಾ ರೈಲು ನಿಲ್ದಾಣದ ಬಳಿ ಎಲ್ಲಾ ಟ್ರ್ಯಾಕ್ಗಳನ್ನು ಬಹಳ ಶೀಘ್ರದಲ್ಲಿ ಓಡಾಟಕ್ಕೆ ಅನುವು ಮಾಡಿಕೊಡುವತ್ತ ಪ್ರಯತ್ನಿಸಲಾಗುತ್ತಿದೆ. ಭಾನುವಾರ ರಾತ್ರಿ ಹೊತ್ತಿಗೆ ಕನಿಷ್ಠ ಎರಡು ರೈಲ್ವೆ ಲೈನ್ಗಳಾದರೂ ಬಳಕೆಗೆ ಸಿಗಲಿದೆ ಎಂದು ರೈಲ್ವೆ ಬೋರ್ಡ್ ಹೇಳಿದೆ.
ಈ ಮಾರ್ಗ ದಕ್ಷಿಣ ಭಾರತ ಮತ್ತು ಈಶಾನ್ಯಕ್ಕೆ ಇದು ಸಂಪರ್ಕ ಕಲ್ಪಿಸುತ್ತದೆ. ಆದಷ್ಟೂ ಬೇಗ ಈ ಮಾರ್ಗದ ಪುನಶ್ಚೇತನ ಆಗುವುದು ಮುಖ್ಯ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಕುರಿತು ಮಾತನಾಡಿ, ಜೂನ್ 6, ಮಂಗಳವಾರದೊಳಗೆ ಈ ಮಾರ್ಗವನ್ನು ಸಂಪೂರ್ಣವಾಗಿ ಬಳಕೆಗೆ ಸಿದ್ಧಪಡಿಸಲಾಗುವುದು ಎಂದಿದ್ದಾರೆ. ಎರಡು ಲೈನ್ಗಳನ್ನಾದರೂ ನಾವು ಆದಷ್ಟೂ ಬೇಗ ಸರಿಪಡಿಸುತ್ತೇವೆ ಎಂದು ರೈಲ್ವೆ ಅಧಿಕಾರಿಯೊಬ್ಬರೂ ಪುನರುಚ್ಚರಿಸಿದ್ದಾರೆ.