ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಭೀಕರ ರೈಲು ದುರಂತಕ್ಕೆ ಪಶ್ಚಿಮ ಬಂಗಾಳ ಸಿಎಂ, ಮಾಜಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದು, ತಾವು ಯಾವುದೇ ಸಲಹೆ ನೀಡುವುದಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿದ್ದು, ಇದು ರಾಜಕೀಯ ಮಾಡುವ ಸಂದರ್ಭವಲ್ಲ, ರೈಲ್ವೆ ನನ್ನ ಮಗು ಇದ್ದಂತೆ ಆದ್ದರಿಂದ ನಾನು ಯಾವುದೇ ಸಲಹೆ ನೀಡುವುದಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ರೈಲ್ವೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದು, ನಮ್ಮ ರಾಜ್ಯದ ಜನತೆಗೆ ನಾವು ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಿದ್ದೇವೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗುವವರೆಗೆ ನಾವು ಒಡಿಶಾ ಸರ್ಕಾರ ಹಾಗೂ ರೈಲ್ವೆಗೆ ಅಗತ್ಯ ನೆರವಿಗೆ ಸಹಕರಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಒಂದು ವೇಳೆ ರೈಲು ಡಿಕ್ಕಿ ತಡೆ ವ್ಯವಸ್ಥೆ ಅಳವಡಿಸಿದ್ದರೆ ಇಷ್ಟು ಪ್ರಮಾಣದಲ್ಲಿ ಸಾವು ಸಂಭವಿಸುತ್ತಿರಲಿಲ್ಲ ಎಂದು ಮಮತಾ ಬ್ಯಾನರ್ಜಿ ಅಶ್ವಿನಿ ವೈಷ್ಣವ್ ಎದುರು ಹೇಳಿದ್ದಾರೆ.
ಕೋರಮಂಡಲ್ ಎಕ್ಸ್ಪ್ರೆಸ್ನಲ್ಲಿ ಯಾವುದೇ ಆಂಟಿ-ಕೊಲ್ಯೂಷನ್ ಸಾಧನ ಇರಲಿಲ್ಲ, ನಾನು ರೈಲ್ವೆ ಸಚಿವನಾಗಿದ್ದಾಗ, ಅದೇ ಹಳಿಯಲ್ಲಿ ಚಲಿಸುವ ರೈಲುಗಳು ನಿರ್ದಿಷ್ಟ ದೂರದಲ್ಲಿ ನಿಲ್ಲುವುದನ್ನು ಖಾತ್ರಿಪಡಿಸುವ ಡಿಕ್ಕಿ ತಡೆ ಸಾಧನವನ್ನು ನಾನು ಪರಿಚಯಿಸಿದೆ.ಈಗ, ನೀವು (ಅಶ್ವಿನಿ ವೈಷ್ಣವ್) ಇದ್ದಾಗ. ಇಲ್ಲಿ, ಈ ರೈಲಿನಲ್ಲಿ ಇಂತಹ ಯಾವುದೇ ಸಾಧನ ಇರಲಿಲ್ಲ . ಒಂದು ವೇಳೆ ಆ ತಂತ್ರಜ್ಞಾನ ಅಳವಡಿಸಿದ್ದರೆ, ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಂದಿನ ದಿನಗಳಲ್ಲಿ ರೈಲ್ವೆ ಬಜೆಟ್ ಮಂಡಿಸುತ್ತಿಲ್ಲ, ರೈಲ್ವೆ ನನ್ನ ಮಗುವಿನಂತೆ, ನಾನು ರೈಲ್ವೆ ಕುಟುಂಬದ ಸದಸ್ಯೆ ಮತ್ತು ಸಲಹೆ ನೀಡಲು ಸದಾ ಸಿದ್ಧಳಿದ್ದೇನೆ ಎಂದು 1999ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ರೈಲ್ವೇ ಸಚಿವೆಯಾಗಿ ಸೇವೆ ಸಲ್ಲಿಸಿದ್ದ ಮಮತಾ ಬ್ಯಾನರ್ಜಿ ಹೇಳಿದ್ದಾರೆ