ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ: ಕಾರವಾರದ ಕಡಲ ತೀರದಲ್ಲಿ ಅಲೆಗಳ ರುದ್ರ ನರ್ತನ

ಹೊಸದಿಗಂತ ವರದಿ,ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು, ಕಡಲ ಅಬ್ಬರ ಹೆಚ್ಚಿದೆ ಕಾರವಾರದ ದೇವಭಾಗ ಕಡಲ ತೀರದಲ್ಲಿ ಭಾರೀ ಕಡಲ ಅಲೆಗಳು ಅಪ್ಪಳಿಸಿದ ಪರಿಣಾಮ ಜಂಗಲ್ ರೆಸಾರ್ಟ್ ಅವರಿಗೆ ಸೇರಿದ ನಾಲ್ಕು ಕೊಠಡಿಗಳು ಕುಸಿದು ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಕಡಲ ತೀರದ ಪ್ರವಾಸೋದ್ಯಮದ ಉದ್ದೇಶದಿಂದ ದೇವಭಾಗ ಜಂಗಲ್ ರೆಸಾರ್ಟ್ ವತಿಯಿಂದ ದೇವಭಾಗ ಸಮುದ್ರ ತೀರದಲ್ಲಿ ಒಟ್ಟು 18 ಕಾಟೇಜ್ ಗಳನ್ನು ನಿರ್ಮಿಸಲಾಗಿದ್ದು ದೇಶದ ವಿವಿಧ ಭಾಗಗಳ ಪ್ರವಾಸಿಗರು ಆಗಮಿಸಿ ಇಲ್ಲಿ ಕಾಲ ಕಳೆಯುತ್ತಾರೆ.
ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ವೇಗದಲ್ಲಿ ಗಾಳಿ ಬೀಸುತ್ತಿರುವ ಪರಿಣಾಮ ಸಮುದ್ರದಲ್ಲಿ ಅಲೆಗಳ ರುದ್ರ ನರ್ತನ ಕಂಡು ಬರತೊಡಗಿದೆ.

ಭಾರೀ ಗಾತ್ರದ ಅಲೆಗಳು ಕಡಲ ತೀರಕ್ಕೆ ಬಂದು ಅಪ್ಪಳಿಸುತ್ತಿದ್ದು ದೇವಭಾಗ ರೆಸಾರ್ಟ್ ನ ಸಮುದ್ರ ತೀರದ ಸಮೀಪ ಇರುವ ನಾಲ್ಕು ಕೊಠಡಿಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಕುಸಿದು ಬಿದ್ದು ನೆಲ ಸಮವಾಗಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಭಾರೀ ಮಳೆ ಬಿರುಗಾಳಿ ಬೀಸುತ್ತಿರುವ ಕಾರಣ ಈ ಕೊಠಡಿಗಳಲ್ಲಿ ಪ್ರವಾಸಿಗರು ವಾಸಿಸಲು ಅವಕಾಶ ನೀಡದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಅಲೆಗಳ ಹೊಡೆತಕ್ಕೆ ಸಿಲುಕಿದ ಕೊಠಡಿಗಳು ಖಾಲಿಯಾಗಿದ್ದವು ಇದರಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.

ಕಾರವಾರ ಅಂಕೋಲಾ ತಾಲೂಕಿನ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕಡಲ ಅಬ್ಬರ ಹೆಚ್ಚುತ್ತಿದ್ದು ಬಹು ದೂರದ ವರೆಗೆ ಕಡಲ ಭೋರ್ಗರೆಯುವ ಸದ್ದು ಕೇಳಿ ಬರತೊಡಗಿದೆ.

ಹಲವಾರು ಕಡೆಗಳಲ್ಲಿ ಕಡಲ ಕೊರೆತಕ್ಕೆ ತೀರದ ಗಿಡ ಮರಗಳು ಕೊಚ್ಚಿ ಹೋಗುತ್ತಿದ್ದು ಅನೇಕ ಕಡೆಗಳಲ್ಲಿ ಜನವಸತಿ ಪ್ರದೇಶ, ಕೃಷಿ ಭೂಮಿಗಳಿಗೆ ಸಮುದ್ರದ ನೀರು ನುಗ್ಗುವ ಆತಂಕ ಎದುರಾಗಿದ್ದು ಕಡಲ ತೀರದ ನಿವಾಸಿಗಳು ಭಯಭೀತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!