ಹೊಸದಿಗಂತ ವರದಿ,ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.
ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ–275ರ ಮೂಲಕ ಮಂಗಳೂರು- ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರು ಹಾಗೂ ಪ್ರವಾಸಿಗರು ನಿಟ್ಟುಸಿರು ಬಿಡುವಂತಾಗಿದೆ.
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಮದೆನಾಡು ಸಮೀಪದ ಕರ್ತೋಜಿ ಎಂಬಲ್ಲಿ ಭೂಕುಸಿತದ ಭೀತಿ ಎದುರಾಗಿತ್ತು.
ಈ ಹಿನ್ನೆಲೆಯಲ್ಲಿ ಜು.18ರಿಂದ ಜು.22ರವರೆಗೆ ಈ ಮಾರ್ಗದಲ್ಲಿ ರಾತ್ರಿ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.
ಅದರಂತೆ ಜು.18ರ ರಾತ್ರಿ 8ಗಂಟೆಯಿಂದ ಜು.22ರ ಬೆಳಗ್ಗೆ 6ಗಂಟೆಯವರೆಗೆ ಈ ಮಾರ್ಗದಲ್ಲಿ ರಾತ್ರಿವೇಳೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಇದೀಗ ಮಳೆಯ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ಯಥಾಸ್ಥಿತಿಗೆ ಮರಳಿದೆ.
ಇದು ಪ್ರತೀವರ್ಷದ ಸಮಸ್ಯೆ: ಮಡಿಕೇರಿ-ಸಂಪಾಜೆ ನಡುವೆ ಮಳೆಗಾಲದಲ್ಲಿ ವಾಹನ ಸಂಚಾರ ವ್ಯತ್ಯಯವಾಗುತ್ತಿರುವುದು ಇದೇ ಮೊದಲಲ್ಲ. 2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಬಳಿಕ ಇದೀಗ ಪ್ರತೀವರ್ಷ ಅಧಿಕ ಮಳೆಯಾದಾಗ ಈ ಸಮಸ್ಯೆ ಎದುರಾಗುತ್ತಿದೆ.
ಇದರಿಂದಾಗಿ ಮಂಗಳೂರು-ಮೈಸೂರು ನಡುವೆ ಸಂಚರಿಸುವವರು ದೂರದ ಶಿರಾಡಿ ಘಾಟಿ ಮೂಲಕ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲೂ ಬರೆ ಕುಸಿತ ಉಂಟಾದಲ್ಲಿ ಮತ್ತಷ್ಟು ದೂರದ ಚಾರ್ಮಾಡಿ ಘಾಟಿಯನ್ನು ಅವಲಂಬಿಸಬೇಕಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಶಿರಾಡಿ ಹಾಗೂ ಚಾರ್ಮಾಡಿ ಘಾಟಿಗಳಲ್ಲೂ ಭೂಕುಸಿತ ಉಂಟಾಗುತ್ತಿದ್ದು, ಇದರಿಂದಾಗಿ ವಾಹನ ಚಾಲಕರು,ಪ್ರಯಾಣಿಕರು ಅನಿಶ್ಚಿತತೆಯಲ್ಲೇ ಸಂಚರಿಸುವಂತಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಡಿಕೇರಿ-ಸಂಪಾಜೆ ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಶಾಶ್ವತವಾದ ತಡೆಗೋಡೆ ನಿರ್ಮಿಸುವ ಅಗತ್ಯವಿದೆ.
ಈ ಹಿಂದೆ ಸೇನೆಯ ಅಧಿಕಾರಿಗಳು ಕೊಡಗಿಗೆ ಆಗಮಿಸಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದ್ದರು. ಆದರೆ ಆ ನಂತರದ ದಿನಗಳಲ್ಲಿ ಆ ಬಗ್ಗೆ ಸರಕಾರವಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಪ್ರಯತ್ನ ನಡೆಸದಿರುವುದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.