ಬೆಂಗಳೂರಲ್ಲಿ ಮಳೆರಾಯನ ಅಬ್ಬರ: ಜನತೆ ಫುಲ್ ಖುಷ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮಳೆಯೂ ಭರ್ಜರಿ ಪ್ರದರ್ಶನ (Bengaluru Rains) ತೋರಿದೆ.ಲೇಟ್‌ ಆದರೂ ಲೇಟೆಸ್ಟ್‌ ಆಗಿ ಮಳೆರಾಯ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾನೆ

ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮೆಜೆಸ್ಟಿಕ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್, ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆ ಸಮಯವು ರಾತ್ರಿಯಂತೆ ಕತ್ತಲೆ ಆವರಿಸಿತ್ತು. ದಿಢೀರ್ ಮಳೆಗೆ ದ್ವಿಚಕ್ರ ವಾಹನ ಸವಾರರು ಸೇತುವೆ ಕೆಳಗೆ ಹಾಗೂ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದರು.

ಇನ್ನೂ ಬೆಂಗಳೂರಿನ ಆರ್‌.ಟಿ‌ ನಗರದಲ್ಲಿ ಮರವು ಉರುಳಿ ಬಿದ್ದಿತ್ತು. ಇನೋವಾ ಹಾಗೂ ಓಮಿನಿ ಕಾರು ಜಖಂಗೊಂಡಿತ್ತು. ರವೀಂದ್ರನಾಥ್ ಠಾಗೋರ್ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿತ್ತು. ಅದೃಷ್ಟವಶಾತ್‌ ಕಾರಿನಲ್ಲಿ ಇದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ, ಬಿಬಿಎಂಪಿ ಸಿಬ್ಬಂದಿ ದೌಡಾಯಿಸಿದ್ದು, ಮರ ತೆರವು ಮಾಡುತ್ತಿದ್ದಾರೆ. ಇತ್ತ ಕೊತ್ತನೂರು ಬಳಿ ಕಾರಿನ ಮೇಲೆ ವಿದ್ಯುತ್‌ ಕಂಬ ಬಿದ್ದು ಕಾರಿನ ಬ್ಯಾನೆಟ್ ಹಾಳಾಗಿತ್ತು. ವಿದ್ಯುತ್‌ ಕಂಬ ಕಳಚಿ ಬಿದ್ದ ಕಾರಣ ಕರೆಂಟ್‌ ಕಟ್ಟ್‌ ಆಗಿತ್ತು.

ಮೈಸೂರು, ಮಂಡ್ಯದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ
ಮಂಡ್ಯದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯಾಗುತ್ತಿದೆ. ಹಲವು ದಿನಗಳಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಮಂಡ್ಯ ಜನರು ಖುಷಿಯಾಗಿದ್ದಾರೆ. ಭಾರಿ ಶಬ್ಧದೊಂದಿಗೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಮೈಸೂರಿನಲ್ಲಿ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ವರುಣ ಸಿಂಚನವಾಗಿದೆ. ತಿ.ನರಸೀಪುರ ತಾಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಜೋರು ಗಾಳಿ ನಡುವೆ ಆಲಿಕಲ್ಲು ಮಳೆಯಾಗಿದೆ.

ಹೊಸಕೋಟೆಯಲ್ಲೂ ಬಿರುಗಾಳಿ ಮಳೆ
ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದೆ. ವರ್ಷದ ಮೊದಲ ಮಳೆ ಕಂಡು ಜನರು ಸಂತಸಗೊಂಡಿದ್ದಾರೆ.

ಚಾಮರಾಜನಗರದಲ್ಲೂ ಮಳೆಯ ಸಿಂಚನ
ಚಾಮರಾಜನಗರದಲ್ಲೂ ವರುಣನ ಅಗಮನವಾಗಿದೆ. ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ, ಚೆನ್ನಪ್ಪಪುರ, ಅರಕಲವಾಡಿ ವೆಂಕಟಯ್ಯನ ಛತ್ರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಬೇಸಿಗೆಯಿಂದ ಬೇಸತ್ತಿದ್ದ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿದೆ.

ರಾಮನಗರದಲ್ಲೂ ತಂಪೆರೆದ ಮಳೆ
ರಾಮನಗರ ಜಿಲ್ಲೆಯಲ್ಲೂ ಹಲವೆಡೆ ವರುಣ ದರ್ಶನ ಕೊಟ್ಟಿದ್ದಾನೆ. ಗುಡುಗು ಸಹಿತ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಪೂರ್ವಜರ ನಂಬಿಕೆಯಂತೆ ಭರಣಿ ಮಳೆ ಆಗಮಿಸಿದೆ. ಭರಣಿ ಮಳೆ ಬಂದರೆ ರೈತರ ಕೃಷಿ ಚುಟುವಟಿಕೆ ಆರಂಭಿಸಲು ಯಶಸ್ವಿ ಎಂಬ ನಂಬಿಕೆ ಇದೆ. ಸದ್ಯ ಭರಣಿ ಮಳೆಯ ಸಿಂಚನದಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!