ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಮಳೆಚುರುಕುಗೊಂಡಿದ್ದು, ಇಂದಿನಿಂದ ಮುಂದಿನ 48 ಗಂಟೆ (ಶನಿವಾರ) ವರೆಗೆ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಸುರಿಯಲಿದೆ.
ಮಹಾದೇವಪುರ ವಲಯ ವ್ಯಾಪ್ತಿಯ ಹೊರಮಾವು (2) ನಲ್ಲಿ 10.50 ಮಿಲಿ ಮೀಟರ್ ಸುರಿದಿದೆ. ಇನ್ನುಳಿದಂತೆ ತುಂತುರು ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಮುಂದಿನ ಸೆಪ್ಟಂಬರ್ 21ರವರೆಗೆ ವಿವಿಧೆಡೆ ವ್ಯಾಪಕ ಮಳೆ ಸಾಧ್ಯತೆ ಇದ್ದು, ಭಾನುವಾರದಿಂದ ಮಳೆ ಅಬ್ಬರು ತುಸು ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ಜೋರು ಮಳೆ ಸುರಿದರೆ, ಇನ್ನೂ ಹಲವೆಡೆ ಆಗಾಗ ಜಿಟಿ ಜಿಟಿ ಮಳೆ ಬೀಳಲಿದೆ. ಇಡೀ ದಿನ ಮೋಡ ಕವಿದ ಮಳೆ ಆಗಲಿದೆ. ಶುಷ್ಕ ವಾತಾವರಣ ಕಡಿಮೆ ಆಗಿದ್ದು, ತಂಪು ವಾತಾವರಣ ನಿರ್ಮಾಣವಾಗಿದೆ.
ನಗರದ ಕೆಲವೆಡೆ ಜೋರು ಮಳೆ ಆಗಿದೆ. ಇದೇ ವೇಳೆ ಕೆಆರ್ ಪುರ ರೈಲು ನಿಲ್ದಾಣದ ಮುಂಭಾಗದಲ್ಲಿ ಭೂಮಿ ಕುಸಿತ ಸಂಭವಿಸಿದೆ. ಇದರಿಂದ ಒಂದು ಲೈನ್ ಸಂಚಾರಕ್ಕೆ ಮಾತ್ರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಇದರಿಂದಾಗಿ ಅಲ್ಲಲ್ಲಿ ಸಂಚಾರ ದಟ್ಟಣೆ ಕಡಿಮೆ ಆಯಿತು. ಹೀಗಾಗಿ ನಗರದ ಒಳಗೆ ಪ್ರವೇಶಿಸುವ ವಾಹನಗಳು ನಿಧಾನವಾಗಿ ಚಲಿಸಿದ ದೃಶ್ಯ ಕಂಡು ಬಂತು.
ಸೆಪ್ಟಂಬರ್ 21ರವರೆಗೆ ಮಳೆ ಮುಂದುವರಿಯಲಿದ್ದು, ತಾಪಮಾನ ಇಳಿಕೆ ಆಗಲಿದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಕರ್ನಾಟಕದಲ್ಲಿ ಮುಂದಿನ ನಾಲ್ಕೈದು ದಿನ ಮಳೆ ವ್ಯಾಪಕವಾಗಿ ಸುರಿಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಬಿರುಸಿನಿಂದ ಕೂಡಿರಲಿದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರೀ ಮಳೆ ಬರಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ತುಮಕೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.