ಹೊಸದಿಗಂತ ವರದಿ,ಮಂಡ್ಯ :
ಸಕ್ಕರೆನಾಡಲ್ಲಿ ವರ್ಷದ ಮೊದಲ ಮಳೆ ಬೀಳುವ ಮೂಲಕ ಇಳೆಯನ್ನು ತಂಪಾಗಿಸಿದೆ. ಮಳೆ ಬೀಳುತ್ತಿರುವುದನ್ನು ಕಂಡ ಜನತೆ ಮನೆ, ಅಂಗಡಿ ಮುಂಗಟ್ಟುಗಳಿಂದ ಹೊರಗೋಡಿಬಂದು ಸ್ವಲ್ಪ ಮಳೆಯಲ್ಲಿ ನೆನೆದು ತಮ್ಮ ಖುಷಿ ವ್ಯಕ್ತಪಡಿಸಿದರು.
ಕಳೆದ ತಿಂಗಳಿಗೂ ಹೆಚ್ಚು ಕಾಲದಿಂದ ಮುನಿಸಿಕೊಂಡಿದ್ದ ವರುಣ ಕಡೆಗೂ ಮುನಿಸು ಮರೆತು ಧರೆಗಿಳಿದ್ದಾನೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ವರ್ಷಧಾರೆಯಾಗಿದ್ದು, ಜಿಲ್ಲೆಯ ಜನರ ಮುಖದಲ್ಲಿ ಮಂದಹಾಸ ಮೂಡಿದೆ.
ಗುಡುಗು, ಬಿರುಗಾಳಿ ಸಹಿತ ಆರಂಭವಾದ ಮಳೆ. ಸ್ವಲ್ಪ ಪ್ರಮಾಣದಲ್ಲಿ ಬಿರುಸಾಗೇ ಬಂದಿತ್ತು. ನಂತರ ಬಿರುಗಾಳಿಯಿಂದಾಗಿ ಕೆಲವು ಕಡೆಗಳಲ್ಲಿ ಮರಗಳ ರೆಂಬೆ-ಕೊಂಬೆಗಳು ಧರೆಗುರುಳಿದರೆ, ಮತ್ತೆ ಕೆಲವೆಡೆ ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ.
ಮೊದಲ ಮಳೆ ತಂದ ಫಜೀತಿ !
ಭಾರೀ ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು, ಸ್ವಾಗತ ಕಮಾನುಗಳು, ಜಾಹೀರಾತು ಫಲಕಗಳು ನೆಲಕ್ಕುರುಳಿವೆ. ಬಿರುಗಾಳಿ ಸಹಿತ ಭಾರೀ ಮಳೆಗೆ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಬೆಂಗಳೂರು-ಮೈಸೂರು ಎ್ಸ್ ಪ್ರೆಸ್ ವೇ, ಸರ್ವೀಸ್ ರಸ್ತೆಗಳ ಸಂಚಾರದಲ್ಲೂ ಅಡೆ ತಡೆ ಉಂಟಾಗಿತ್ತು. ಮಂಡ್ಯ ನಗರ, ಮಂಡ್ಯ ನಗರದ ಹೊರವಲಯ, ಇಂಡುವಾಳು, ಸುಂಡಹಳ್ಳಿ ಬಳಿ ಹಾಕಲಾಗಿದ್ದ ಬೃಹತ್ ಸ್ವಾಗತ ಕಮಾನು, ಜಾಹೀರಾತು ಫಲಕಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರೂ, ಯಾವುದೇ ಪ್ರಾಣಾಪಾಯವಾಗಿಲ್ಲ.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸಂಚಾರ ಮುಕ್ತಗೊಳಿಸಲು ಸ್ಥಳೀಯ ಯುವಕರ ಹರಸಾಹಸಪಟ್ಟರು. ಕಡೆಗೂ ಸಂಚಾರ ಮುಕ್ತಗೊಳಿಸುವಲ್ಲಿ ಯಶಸ್ವಿಯಾದರು.
ಸರ್ವೀಸ್ ರಸ್ತೆಗಳು ಜಲಾವೃತ :
ಕಳೆದ ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರಮೋದಿಯವರು ಉದ್ಘಾಟಿಸಿದ್ದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಕೆಲ ಕಾಲ ಸುರಿದ ಮಳೆಯಿಂದಾಗಿ ಸರ್ವೀಸ್ ರಸ್ತೆಗಳೆಲ್ಲವೂ ಜಲಾವೃತವಾಗಿದ್ದವು. ಅಂಡರ್ಪಾಸ್ಗಳಲ್ಲಿ ಮಂಡಿಯುದ್ದ ನೀರು ನಿಂತಿದ್ದು, ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಬೈಕ್ ಸವಾರರು ನೀರಿನೊಳಗೆ ವಾಹನಗಳನ್ನು ತಳ್ಳಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.