ಹೊಸದಿಗಂತ ವರದಿ: ಕಾಸರಗೋಡು:
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಐಕ್ಯರಂಗ ಒಕ್ಕೂಟವು ಭರ್ಜರಿ ಗೆಲುವು ಸಾಧಿಸಿದೆ. ಅದರಂತೆ ಐಕ್ಯರಂಗದ ಅಭ್ಯರ್ಥಿ, ಹಾಲಿ ಸಂಸದ, ಕಾಂಗ್ರೆಸ್ ನೇತಾರ ರಾಜ್ ಮೋಹನ್ ಉಣ್ಣಿತ್ತಾನ್ 4,58,912 ಮತಗಳನ್ನು ಪಡೆದಿದ್ದು, 1,03,027 ಮತಗಳ ಅಂತರದಿಂದ ಪ್ರಚಂಡ ಗೆಲುವು ದಾಖಲಿಸಿದರು.
ಅವರ ಸಮೀಪದ ಪ್ರತಿಸ್ಪರ್ಧಿ ಎಡರಂಗದ ಅಭ್ಯರ್ಥಿಯಾದ ಸಿಪಿಎಂ ಮುಖಂಡ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ 3,63,444 ಮತಗಳನ್ನು ಗಳಿಸಿದ್ದಾರೆ. ಎನ್ ಡಿಎ ಅಭ್ಯರ್ಥಿಯಾದ ಬಿಜೆಪಿ ಮುಂದಾಳು ಅಶ್ವಿನಿ ಎಂ.ಎಲ್. ಪಜ್ವ 2,07,340 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು. ಇದೇ ವೇಳೆ ಎನ್ ಡಿಎ ಅಭ್ಯರ್ಥಿಗೆ ಕಳೆದ ಬಾರಿಗಿಂತ ಈ ಬಾರಿ ಮತಗಳ ಪ್ರಮಾಣದಲ್ಲಿ ಭಾರೀ ಹೆಚ್ಚಳ ಉಂಟಾಗಿದ್ದು, ಗಮನಾರ್ಹ ಅಂಶವಾಗಿದೆ.