Saturday, January 10, 2026

ಬಾಕ್ಸ್ ಆಫೀಸ್‌ನಲ್ಲಿ ‘ರಾಜಾ ಸಾಬ್’ ಅಬ್ಬರಕ್ಕೆ ವಿಘ್ನ: ಒಂದೆಡೆ ಟೀಕೆ, ಮತ್ತೊಂದೆಡೆ ಕಾನೂನು ಸಂಕಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ದಿ ರಾಜಾ ಸಾಬ್’ ಸಿನಿಮಾ ಇಂದು ಅದ್ಧೂರಿಯಾಗಿ ತೆರೆಕಂಡಿದೆ. ಮಾರುತಿ ನಿರ್ದೇಶನದ ಈ ಹಾರರ್ ಕಾಮಿಡಿ ಚಿತ್ರ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿತ್ತು. ಆದರೆ, ಬಿಡುಗಡೆಯ ಸಂಭ್ರಮದ ನಡುವೆಯೇ ಚಿತ್ರತಂಡಕ್ಕೆ ತೆಲಂಗಾಣ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.

ಸಿನಿಮಾ ಬಿಡುಗಡೆಗೂ ಮುನ್ನ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳಿಂದ ಅನುಮತಿ ಪಡೆದಿದ್ದ ಚಿತ್ರತಂಡ, ಹೈದರಾಬಾದ್‌ನಂತಹ ನಗರಗಳಲ್ಲಿ ಟಿಕೆಟ್ ದರವನ್ನು 450 ರಿಂದ 550 ರೂಪಾಯಿಗಳವರೆಗೆ ನಿಗದಿಪಡಿಸಿತ್ತು. ಆದರೆ, ಈ ಹಿಂದೆ ‘ಅಖಂಡ 2’ ಬಿಡುಗಡೆಯ ಸಂದರ್ಭದಲ್ಲಿ ನೀಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್, ಟಿಕೆಟ್ ಬೆಲೆ ಏರಿಕೆಯನ್ನು ಟೀಕಿಸಿದೆ.

ಸರ್ಕಾರಿ ಆದೇಶ 120ರ ಪ್ರಕಾರ, ಯಾವುದೇ ಸಿನಿಮಾದ ಟಿಕೆಟ್ ದರ 350 ರೂಪಾಯಿಗಳಿಗಿಂತ ಹೆಚ್ಚಿರಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ನೀಡಲಾಗಿರುವ ಟಿಕೆಟ್ ದರ ಹೆಚ್ಚಳದ ಅನುಮತಿಯನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಒಂದೆಡೆ ನ್ಯಾಯಾಲಯದ ಆದೇಶದಿಂದ ಟಿಕೆಟ್ ದರ ಇಳಿಕೆಯಾಗುವ ಭೀತಿ ಎದುರಾಗಿದ್ದರೆ, ಮತ್ತೊಂದೆಡೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆರಂಭಿಕ ಶೋಗಳು ಉತ್ತಮವಾಗಿ ಕಂಡರೂ, ವಿಮರ್ಶಕರು ಸಿನಿಮಾದ ಕಥೆ ಮತ್ತು ನಿರೂಪಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಶನಿವಾರದಿಂದ ಸಿನಿಮಾದ ಕಲೆಕ್ಷನ್ ಕುಸಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿರುವ ಈ ಚಿತ್ರದಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಹಾಗೂ ರಿಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಸಂಜಯ್ ದತ್ ಮತ್ತು ಬೊಮನ್ ಇರಾನಿ ಅಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದರೂ, ಈಗ ಎದುರಾಗಿರುವ ಕಾನೂನು ಮತ್ತು ವಿಮರ್ಶೆಯ ಸವಾಲುಗಳನ್ನು ಸಿನಿಮಾ ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

error: Content is protected !!