ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಎಂಥಿರನ್’ ನಿರ್ದೇಶಕ ಎಸ್. ಶಂಕರ್ ಗೆ ಇಡಿ ಶಾಕ್ ನೀಡಿದೆ.
2010 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಕೃತಿಚೌರ್ಯ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪಗಳನ್ನು ಎದುರಿಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಶಂಕರಿಗೆ ಅವರಿಗೆ ಸೇರಿದ ರೂ.10 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಕೃತಿಚೌರ್ಯ ಅಥವಾ ಹಕ್ಕು ಸ್ವಾಮ್ಯ ಉಲ್ಲಂಘನೆ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆಸ್ತಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ದೇಶಕ ಎಸ್ ಶಂಕರ್ ಅವರ ಮೂರು ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ವಶಕ್ಕೆ ಪಡೆದು ಫೆಬ್ರವರಿ 17 ರಂದು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ. ಈ ಆಸ್ತಿಗಳ ಒಟ್ಟು ಮೌಲ್ಯ 10.11 ಕೋಟಿ ರೂಪಾಯಿ ಎಂದು ED ಹೇಳಿಕೆಯಲ್ಲಿ ತಿಳಿಸಿದೆ.
ಮೇ 19, 2011 ರಂದು ಚೆನ್ನೈನ ಎಗ್ಮೋರ್ ನ್ಯಾಯಾಲಯದಲ್ಲಿ ಶಂಕರ್ ವಿರುದ್ಧ ಜಿಗುಬಾ ಎಂಬ ಶೀರ್ಷಿಕೆಯ ಕಥೆಯ ಲೇಖಕ ಆರೂರ್ ತಮಿಳುನಾಡನ್ ಅವರು ಸಲ್ಲಿಸಿದ ದೂರಿನಿಂದ ಹಣ ವರ್ಗಾವಣೆ ಪ್ರಕರಣ ಹೊರಗೆ ಬಂದಿತ್ತು. ಶಂಕರ್ ನಿರ್ದೇಶಿಸಿದ ತಮಿಳು ಚಲನಚಿತ್ರ ಎಂಥಿರನ್ (ರೋಬೋಟ್) ಕಥಾಹಂದರವನ್ನು ಜಿಗುಬಾದಿಂದ ನಕಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
2010ರ ಬ್ಲಾಸ್ಟರ್ ಎಂಥಿರನ್ ಆ ಸಂದರ್ಭದಲ್ಲಿ ವಿಶ್ವದಾದ್ಯಂತ ರೂ.290 ಕೋಟಿ ಗಳಿಸಿತ್ತು. ಕಥೆ, ಚಿತ್ರಕಥೆ, ಸಂಭಾಷಣೆ,ನಿರ್ದೇಶನಕ್ಕಾಗಿ ಶಂಕರ್ ರೂ. 11.5 ಕೋಟಿ ಸಂಭಾವನೆ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಅಲ್ಲದೇ ಅವರು ಹಕ್ಕುಸ್ವಾಮ್ಯ ಉಲ್ಲಂಘಿಸಿರುವುದಕ್ಕೆ ದಾಖಲೆಗಳು ಸಿಕ್ಕಿವೆ ಎಂದು ಇಡಿ ತಿಳಿಸಿದೆ.