Thursday, October 23, 2025

ಮುಸ್ಲಿಂ ಸಂಪ್ರದಾಯದಂತೆ ನೆರವೇರಿತು ರಾಜು ತಾಳಿಕೋಟೆ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೃದಯಾಘಾತದಿಂದ ಸಾವನ್ನಪ್ಪಿದ ನಟ ರಾಜು ತಾಳಿಕೋಟೆ ಅಂತ್ಯ ಸಂಸ್ಕಾರ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿಯ ಖಬರಸ್ತಾನದಲ್ಲಿ ನೆರವೇರಿತು. ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಗಿದೆ.

ನಿಮಾ ಶೂಟಿಂಗ್ ಸಲುವಾಗಿ ಉಡುಪಿಗೆ ತೆರಳಿದ್ದ ರಾಜು ತಾಳಿಕೋಟೆಗೆ ಅ.13ರಂದು ಹೃದಯಾಘಾತ ಆಗಿತ್ತು. ಮನಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ‌‌.

ಧಾರವಾಡರ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆಯವರ ಮೃತದೇಹವನ್ನ ಧಾರವಾಡಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಗೀತಗಾಯನದ ಮೂಲಕ ಕಲಾವಿದರು ತಾಳಿಕೋಟೆ ನಿಧನಕ್ಕೆ ಕಂಬಿನಿ ಮಿಡಿದರು.

ಧಾರವಾಡ ರಂಗಾಯಣದಲ್ಲಿ 2 ಗಂಟೆಗಳ ಅಂತಿಮ ದರುಶನ ಮುಗಿದ ಬಳಿಕ ಮೃತದೇಹವನ್ನು ವಿಜಯಪುರ ಜಿಲ್ಲೆಯ ಚಿಕ್ಕ ಸಿಂದಗಿಯ ತೋಟದ ಮನೆಯಾದ ರಂಗಾಶ್ರಮಕ್ಕೆ ತರಲಾಯಿತು. ಮೃತದೇಹದ ಆಗಮನವಾಗುತ್ತಿದ್ದಂತೆ ಸಹೋದರರು, ಇಬ್ಬರು ಪತ್ನಿಯರು, ಸಹೋದರಿಯರು, ಮೊಮ್ಮಕ್ಕಳು ಬಿಕ್ಕಿಬಿಕ್ಕಿ ಅತ್ತು ಕಣ್ಣೀರಾದರು. ಅವರ ಸಹೋದರಿಯರು, ಒಡನಾಡಿಗಳು ಸಹ‌ಕಲಾವಿದರು ರಾಜೂ ತಾಳಿಕೋಟೆ ನೆನಪುಗಳನ್ನು ನೆನೆದರು.

ರಾಜು ತಾಳಿಕೋಟೆಯವರ ಜೊತೆಗೆ ನಾಟಕಗಳಲ್ಲಿ ವೇದಿಕೆ ಹಂಚಿಕೊಂಡಿದ್ದ ಅನೇಕ ರಂಗಭೂಮಿ ಕಲಾವಿದರು, ಸ್ಥಳೀಯ ನಾಯಕರು ಅಂತಿಮ ದರುಶನ ಪಡೆದರು.
ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವೆ, ನಟಿ ಉಮಾಶ್ರೀ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಸಹ ರಂಗಾಶ್ರಮಕ್ಕೆ ಭೇಟಿ ನೀಡಿ ಅಂತಿಮ ದರುಶನ ಪಡೆದರು.

ಮುಸ್ಲಿಂ ಸಂಪ್ರದಾಯದ ವಿಧಿಗಳನ್ನು ನೆರವೇರಿಸಲಾಯಿತು. ತೋಟದ ಮನೆಯಿಂದ ಮೃತ ದೇಹವನ್ನು ಮೆರವಣಿಗೆ ಮೂಲಕ ಚಿಕ್ಕ ಸಿಂದಗಿ ಗ್ರಾಮದ ಖಬರಸ್ತಾನಕ್ಕೆ ತೆಗೆದುಕೊಂಡು ಬರಲಾಯಿತು. ಅಲ್ಲಿ ಅಂತಿಮ ಪ್ರಾರ್ಥನೆ ಸಲ್ಲಿಕೆ ಮಾಡಲಾಯಿತು. ಬಳಿಕ ಅಂತಿಮ ಕ್ರಿಯಾ ವಿಧಾನಗಳು ನಡೆದವು. ಈ ವೇಳೆ ಕಲಾವಿದರು, ಗ್ರಾಮಸ್ಥರು ಸೇರಿದಂತೆ, ಸಾವಿರಾರು ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ನಗುವಿನ ನಾಯಕನಿಗೆ ಅಂತಿಮ ವಿದಾಯ ಹೇಳಿದರು.

error: Content is protected !!