ಹೊಸದಿಗಂತ ವರದಿ ಬೆಳಗಾವಿ :
ಪಶ್ಚಿಮ ಘಟ್ಟ ಪ್ರದೇಶ ಮತ್ತು ತಿಲಾರಿ ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಕ್ಕಸ ಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಜಲಾಶಯಕ್ಕೆ ಭೇಟಿ ನೀಡಿ ನೀರಿನ ಮಟ್ಟ, ಒಳ ಮತ್ತು ಹೊರಹರಿವು ಹಾಗೂ ಸಾಮರ್ಥ್ಯವನ್ನು ಪರಿಶೀಲಿಸಿದರು.
ಕುಡಿಯುವ ನೀರಿಗಾಗಿ ಬೆಳಗಾವಿ ನಗರದ ಜನತೆ ಹೆಚ್ಚಾಗಿ ರಕ್ಕಸಕೊಪ್ಪ ಜಲಾಶಯದ ಮೇಲೆ ಅವಲಂಬಿತರಾಗಿದ್ದು, ಮಾನ್ಸೂನ್ ಕೈಕೊಟ್ಟಿದ್ದರಿಂದ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಖಾಲಿಯಾಗಿದ್ದರ ಪರಿಣಾಮವಾಗಿ ಬೆಳಗಾವಿಗರಿಗೆ ನೀರಿನ ವ್ಯತ್ಯಯ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಪಾಲಿಕೆಯು ಪರ್ಯಾಯ ವ್ಯವಸ್ಥೆಯನ್ನೂ ಮಾಡಿತ್ತು.ಈಗ ಪ್ರತಿದಿನ 40ರಿಂದ 50 ಮಿ.ಮೀ. ಮಳೆ ಆಗುತ್ತಿರುವುದರಿಂದ ಜಲಾಶಯ ಭರ್ತಿಯಾಗಿ ನಗರದ ಜನತೆಯಲ್ಲಿ ಸಂತಸ ಮೂಡಿಸಿದೆ.
24 ಗಂಟೆ ನೀರು ಪೂರೈಕೆಗೆ ಮತ್ತೆ ಚಾಲನೆ
ಜಲಾಶಯ ಪರಿಶೀಲನೆ ನಂತರ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ. ಆವರು, ರಕ್ಕಸಕೊಪ್ಪ ಮತ್ತು ಹಿಡಕಲ್ ಎರಡೂ ಜಲಾಶಯಗಳಿಂದ ನಗರಕ್ಕೆ ನೀರು ಪೂರೈಕೆ ಆಗುತ್ತಿದೆ. 10 ವಾರ್ಡುಗಳಲ್ಲಿ ದಿನದ 24 ಗಂಟೆ ನೀರು ಸರಬರಾಜು ವ್ಯವಸ್ಥೆ ಇದೆ. ನೀರಿನ ಕೊರತೆಯಿಂದಾಗಿ ಈ ಮೊದಲು 2 ರಿಂದ 3 ದಿನಗಳಿಗೊಮ್ಮೆ 2 ಗಂಟೆ ಮಾತ್ರ ನೀರು ಸರಬರಾಜು ಇತ್ತು. ಈಗ ಡ್ಯಾಮ್ ಭರ್ತಿಯಾಗಿದ್ದರಿಂದ ಈ ಮೊದಲಿನಂತೆ 24 ಗಂಟೆಯೂ ನೀರು ಸರಬರಾಜು ಆಗಲಿದೆ.
ಮೇ ತಿಂಗಳವರೆಗೆ ನೀರಿನ ಸಮಸ್ಯೆ ಇಲ್ಲ .
ಉಳಿದ 48 ವಾರ್ಡಗಳಲ್ಲಿ ಬೇಸಿಗೆಯಲ್ಲಿ 8 ರಿಂದ 10 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ಈಗ 2 ರಿಂದ 3 ದಿನಗಳಿಗೊಮ್ಮೆ ಬಿಡಲಾಗುತ್ತಿದೆ. ರಕ್ಕಸಕೊಪ್ಪ ಜಲಾಶಯ 2475 ಅಡಿ ಎತ್ತರವಿದ್ದು, ಸಂಪೂರ್ಣ ಭರ್ತಿಯಾಗಿದೆ. ರಕ್ಕಸಕೊಪ್ಪ ಮತ್ತು ಹಿಡಕಲ್ ಜಲಾಶಯದಿಂದ ಒಟ್ಟು 105 ಎಂಎಲ್‌ಡಿ ನೀರು ಸರಬರಾಜು ಆಗುತ್ತಿರುವುದರಿಂದ ಮೇವರೆಗೆ ನೀರಿನ ಸಮಸ್ಯೆಯಾಗದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಯುಡಿಎಫ್ ಸಿ ಅಭಿಯಂತರ, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.



