ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ಬಿಡುಗಡೆಗೂ ಮುನ್ನವೇ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ.
ಅಮೆರಿಕಾದಲ್ಲಿ ಅದ್ದೂರಿಯಾಗಿ ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮಾಡಲಾಗಿದೆ. ಆ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಈತನಕ ಯಾರೂ ಮಾಡಿರದ ದಾಖಲೆಯನ್ನು ‘ಗೇಮ್ ಚೇಂಜರ್’ ಮಾಡಿದೆ. ವಿಶೇಷ ಏನೆಂದರೆ, ರಾಮ್ ಚರಣ್ ಅವರ ಅಭಿಮಾನಿಗಳು ಕೂಡ ಒಂದು ಹೊಸ ರೆಕಾರ್ಡ್ ಸೃಷ್ಟಿ ಮಾಡಿದ್ದಾರೆ.
2025ರ ಜನವರಿ 10ರಂದು ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಜಯವಾಡದ ಬೃಂದಾವನ ಕಾಲೋನಿಯ ವಜ್ರ ಗ್ರೌಂಡ್ಸ್‌ನಲ್ಲಿ ರಾಮ್ ಚರಣ್ ಅವರ ಬರೋಬ್ಬರಿ 256 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಭಾರತದ ಅತಿ ದೊಡ್ಡ ಕಟೌಟ್ ಎಂಬ ಖ್ಯಾತಿ ಇದಕ್ಕೆ ಸಿಕ್ಕಿದೆ.
4 ವರ್ಷಗಳ ಹಿಂದೆ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ‘ರಾಕಿಂಗ್ ಸ್ಟಾರ್’ ಯಶ್ ಅವರ ಅಭಿಮಾನಿಗಳು 236 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದರು. ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಸೂರ್ಯ ಫ್ಯಾನ್ಸ್ 215 ಅಡಿ ಎತ್ತರದ ಕಟೌಟ್ ನಿಲ್ಲಿಸಿ ದಾಖಲೆ ಮಾಡಿದ್ದರು. ಕಳೆದ ವರ್ಷ ಪ್ರಭಾಸ್ ಫ್ಯಾನ್ಸ್ 230 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದರು. ಆದರೆ ಈಗ ರಾಮ್ ಚರಣ್ ಅವರ ಅಭಿಮಾನಿಗಳು ಹಳೆಯ ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ.