ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ದಿನಗಳಲ್ಲಿ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಬಲು ಜೋರಾಗಿ ನಡೆಯುತ್ತಿದೆ.
ತೆಲುಗಿನ ಯಾವುದೇ ದೊಡ್ಡ ಬಜೆಟ್ ಸಿನಿಮಾ ಬಿಡುಗಡೆ ಆದಾಗಲೂ ಸಹ ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳಿಂದ ಅನುಮತಿ ಪಡೆದು, ಟಿಕೆಟ್ ದರ ಹೆಚ್ಚಳ ಮತ್ತು ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಶೋಗಳನ್ನು ಹಾಕಲಾಗುತ್ತದೆ. ಅಂತೆಯೇ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಹೆಚ್ಚುವರಿ ಶೋ ಹಾಕಲು ಹಾಗೂ ಟಿಕೆಟ್ ದರ ಹೆಚ್ಚಿಸಿಕೊಳ್ಳಲು ಆಂಧ್ರ ಸರ್ಕಾರದ ಅನುಮತಿ ದೊರೆತಿದೆ.
ಹೀಗಾಗಿ ‘ಗೇಮ್ ಚೇಂಜರ್’ ಸಿನಿಮಾದ ಟಿಕೆಟ್ ದರವನ್ನು 50% ಹೆಚ್ಚಿಸಲು ಸಿನಿಮಾದ ನಿರ್ಮಾಪಕರು ರೆಡಿಯಾಗಿದ್ದಾರೆ. ಅಲ್ಲದೆ ದಿನಕ್ಕೆ ಏಳು ಅಥವಾ ಎಂಟು ಶೋ ಪ್ರದರ್ಶಿಸಲು ರೆಡಿಯಾಗಿದ್ದಾರೆ.
ಆಂಧ್ರದಲ್ಲಿ ಸರ್ಕಾರದ ಅನುಮತಿ ಸಿಕ್ಕಿದೆ ಆದರೆ ತೆಲಂಗಾಣದಲ್ಲಿ ‘ಗೇಮ್ ಚೇಂಜರ್’ ಸಿನಿಮಾಕ್ಕೆ ಯಾವುದೇ ವಿಶೇಷ ಅನುಮತಿ ನೀಡಲಾಗಿಲ್ಲ. ಇತ್ತೀಚೆಗಷ್ಟೆ ನಡೆದ ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆ ಬಳಿಕ ತೆಲುಗು ಚಿತ್ರರಂಗದ ಮೇಲೆ ಅಸಮಾಧಾನ ವ್ಯಕ್ತಪಡಿಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಇನ್ನು ಮುಂದೆ ಯಾವುದೇ ಬೆನಿಫಿಟ್ ಶೋ, ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡುವುದಿಲ್ಲ ಎಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ‘ಗೇಮ್ ಚೇಂಜರ್’ ಸಿನಿಮಾದ ನಿರ್ಮಾಪಕ ದಿಲ್ ರಾಜು, ತೆಲಂಗಾಣ ಸರ್ಕಾರದ ನಿಗಮವೊಂದರ ಅಧ್ಯಕ್ಷರಾಗಿದ್ದು, ಸಿಎಂ ಅವರನ್ನು ಟಿಕೆಟ್ ದರ ಹೆಚ್ಚಳದ ವಿಷಯದಲ್ಲಿ ಒಪ್ಪಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಜೊತೆಗೆ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಸಿನಿಮಾದಲ್ಲಿ ಎಸ್ಜೆ ಸೂರ್ಯ ವಿಲನ್, ಸುನಿಲ್ ಸಹ ಇದ್ದಾರೆ. ಸಿನಿಮಾ ಅನ್ನು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನ ಮಾಡಿದ್ದಾರೆ. ದಿಲ್ ರಾಜು ಬಂಡವಾಳ ಹೂಡಿದ್ದಾರೆ.
ಜಿಲ್ಲಾಧಿಕಾರಿಯೊಬ್ಬ ಸಿಎಂ ಎದುರು ಹೋರಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.