ಹೊಸದಿಗಂತ ವರದಿ, ಬೆಂಗಳೂರು
ಜ. 22ರಂದು ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಠಾಪನೆ ಸಂಪನ್ನಗೊಂಡಿರುವುದು ನಮ್ಮ ಮೂಲ ಸಂಸ್ಕೃತಿಯ ಪುನರುತ್ಥಾನದ ಸಾಕ್ಷಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಬೆಂಗಳೂರು ಹೊರವಲಯದ ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದ ಆವರಣದಲ್ಲಿ ಸಂಸ್ಕಾರ ಭಾರತೀ ವತಿಯಿಂದ ಅಖಿಲ ಭಾರತೀಯ ಕಲಾಸಾಧಕ ಸಂಗಮ- 2024 ಕಾರ್ಯಕ್ರಮದಲ್ಲಿ ಕಲಾಸಾಧಕರಿಗೆ ಭರತಮುನಿ ವಿಶೇಷ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
ಭಾರತವು ಹಂತ ಹಂತವಾಗಿ ಜಾಗೃತಿಗೊಳ್ಳುವ ಮೂಲಕ ತನ್ನ ಮೂಲ ಭಾರತದ ಸ್ವ ಮರಳಿ ಪಡೆದಿದೆ. ಅಂದಿನ ಕಾರ್ಯಕ್ರಮದ ಬಳಿಕ ಭಾರತದ ಸ್ವ ಪ್ರಕಟೀಕರಣದ ಪ್ರಥಮ ಕಾರ್ಯಕ್ರಮ ಸಂಸ್ಕಾರ ಭಾರತೀ ಮೂಲಕ ನಡೆದಿದೆ. ಸಂಸ್ಕಾರ ಭಾರತೀಯ ಕಾರ್ಯ ಸ್ಥಾಪನೆ ಮಾಡುವುದರ ಹಿಂದಿನ ವ್ಯಾಪಕವಾದ ದೃಷ್ಟಿ ಇದೆ. ಅದಕ್ಕೆ ಅಯೋಧ್ಯೆಯ ರಾಮಲಲಾನ ಪ್ರಾಣಪ್ರತಿಷ್ಠೆಯಾಗಿರುವುದು ಸಾಕ್ಷಿ. ಈ ನಿಟ್ಟಿನಲ್ಲಿ ನಮ್ಮ ಮೂಲ ಸಂಸ್ಕೃತಿಗಳನ್ನು ಪುನರುತ್ಥಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದರಿಂದ ಭಾರತದೆಲ್ಲೆಡೆ ಪ್ರತಿ ಗ್ರಾಮ, ಜಿಲ್ಲೆ ಹಾಗೂ ನಗರಗಳಲ್ಲಿ ಭಾರತೀಯತೆ ಮತ್ತು ರಾಷ್ಟ್ರೀಯತೆ ಬೆಸೆದುಕೊಳ್ಳುತ್ತಿದೆ. ಈ ವಿದ್ಯಮಾನದಿಂದ ರಾಷ್ಟ್ರದ ಪ್ರಗತಿಯ ಏಕತೆಯಾಗಿದೆ ಎಂದು ತಿಳಿಸಿದರು.
ಭಾರತ ಸ್ವಾತಂತ್ರ ಪಡೆದು 75 ವರ್ಷಗಳು ಪೂರ್ಣಗೊಂಡರೂ ಭಾರತೀಯತೆಯನ್ನು ಪ್ರತಿನಿಧಿಸುವ ಕಲಾ ಸಾಧಕರು ಹಲವು ಕಾರಣಗಳಿಂದ ಅಷ್ಟಾಗಿ ಮುನ್ನಲೆಗೆ ಬಂದಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅಂತಹ ಕಲಾತಪಸ್ವಿಗಳನ್ನು ಗುರುತಿಸುವಂತೆ ಮಾಡಿರುವುದು ಸಂಸ್ಕಾರ ಭಾರತೀಯಂತಹ ಸಂಸ್ಥೆಗಳ ಪ್ರಯತ್ನದಿಂದಾಗಿದೆ ಎಂದು ನುಡಿದರು.
ನಮ್ಮ ನಾಡಿನಲ್ಲಿ ರಾಜನ ಕೆಲಸ ಧರ್ಮರಕ್ಷಣೆ. ಧರ್ಮವೆನ್ನುವುದು ಸಮಾಜದ ಧಾರಣೆಯಾಗಿದೆ. ಸಮಾಜದ ಧಾರಣವನ್ನು ರಕ್ಷಿಸುವುದೆಂದರೆ ಸಮಾಜದ ಸಂಸ್ಕಾರ ರಕ್ಷಿಸುವುದೆಂದರೆ ಸಂಸ್ಕಾರವನ್ನು ಕಲಿಸುವ ಜನರ ರಕ್ಷಣೆ. ಅವರಲ್ಲಿ ಕಲಾವಿದರೂ ಪ್ರಮುಖರು, ಹಾಗಾಗಿ ಕಾರ್ಮಿಕರಿಗಾಗಿ ಮದ್ದೂರ್ ಸಂಘ, ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಪರಿಷತ್, ಕ್ರೀಡಾ ಕ್ಷೇತ್ರಕ್ಕಾಗಿ ಕ್ರೀಡಾಭಾರತೀ ಎಂದು ಕರೆದಿದೆ. ಕಲೆಯನ್ನು ಒಳಗೊಂಡ ಸಂಘಟನೆಯನ್ನು ಕಲಾಭಾರತೀ ಎನ್ನದೇ ಅದನ್ನು ಸಂಸ್ಕಾರ ಭಾರತಿ ಎಂದು ಕರೆಯಲಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕಾರ ಭಾರತೀಯ ಸಂಸ್ಥೆ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಅಲ್ಲದೇ, ಸಂಸ್ಕಾರ ಭಾರತೀಯು, ಭಾರತೀಯ ಸಂಸ್ಕೃತಿ ಕಲೆ ವಿಚಾರಗಳನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿದೆ. ಜಾತಿ- ಧರ್ಮ ಭೇದವಿಲ್ಲದೆ ನಮ್ಮ ದೇಶದ ಜನರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ. ಆದರೆ, ಅಖಿಲ ಭಾರತೀಯ ಕಲಾಸಾಧಕ ಸಂಗಮ ಕಾರ್ಯಕ್ರಮವು ಹೊಸ ಇತಿಹಾಸವನ್ನು ರಚಿಸುವ ಮೂಲಕ ನೂತನ ತಿರುವು ಪಡೆಯುತ್ತಿದೆ ಎಂದರು.
ಮಾತಲ್ಲಿ ಮಧುರ ಸ್ವರ ಅಡಕ:
ಮನುಷ್ಯನ ಅಸ್ತಿತ್ವವೇ ಆತನ ಸಂವೇದನೆಯಿಂದಾಗಿದೆ. ಕಲೆಗಳೊಂದಿಗೆ ಜನರ ನಡುವಿನ ಸಾಮರಸ್ಯ ಉಂಟಾಗುತ್ತದೆ. ನಮ್ಮಎದೆ ಬಡಿತವು ಸಂಗೀತದ ತಾಳದಂತಿದೆ. ನಮ್ಮ ಮಾತುಗಳಲ್ಲೇ ಮಧುರ ಸ್ವರಗಳು ಅಡಕವಾಗಿದೆ ಎಂದು ವ್ಯಾಖ್ಯಾನಿಸಿದರು.
ಇದೇ ವೇಳೆ ಚಿತ್ರಕಾರ ವಿಜಯ ದಶರಥ ಆಚರೇಕರ್ ಹಾಗೂ ಲೋಕಕಲಾ ಸಾಧಕ ಗಣಪತ್ ಸಖಾ ರಾಮ್ ಮನೆಗೆ ಅವರಿಗೆ ಭರತಮುನಿ ಹೆಸರಿನಲ್ಲಿ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಕಾರ ಭಾರತೀಯ ಅಖಿಲ ಭಾರತೀಯ ಅಧ್ಯಕ್ಷ ವಾಸುದೇವ್ ಕಾಮತ್, ಭರತಮುನಿ ಪ್ರಶಸ್ತಿ ಪ್ರದಾನ ಸಮಾರಂಭದ ಸಂಚಾಲಕ ಹಾಗೂ ಸಂಸ್ಕಾರ ಭಾರತೀಯ ಅಖಿಲ ಭಾರತೀಯ ಸಹ ಕೋಶಾಧ್ಯಕ್ಷ ಸುಭೋದ್ ಶರ್ಮಾ, ಕ್ಷೇತ್ರೀಯ ಪ್ರಚಾರಕ್ ಸುಧೀರ್ ಉಪಸ್ಥಿತರಿದ್ದರು.