Thursday, August 11, 2022

Latest Posts

ಮುಂದಿನ ವರ್ಷಾಂತ್ಯಕ್ಕೆ ರಾಮ ಮಂದಿರ ಪೂರ್ಣ: ಗೋಪಾಲ ನಾಗರಕಟ್ಟೆ

ಹೊಸದಿಗಂತ ವರದಿ, ಕೊಡಗು:
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕೆಲಸಗಳು ಪ್ರಗತಿಯಲ್ಲಿದ್ದು, 2023ರ ಡಿಸೆಂಬರ್ ಅಂತ್ಯಕ್ಕೆ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವ ಹಿಂದೂ ಪರಿಷದ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯೂ ಆಗಿರುವ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ ನಾಗರಕಟ್ಟೆ ಹೇಳಿದರು.
ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ನವೀಕೃತ ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಐದು ಡಯಾಲಿಸಿಸ್ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಮಮಂದಿರ ನಿರ್ಮಾಣಕ್ಕೆ ದುಡ್ಡಿನ ಕೊರತೆ ಇರಲಿಲ್ಲ. ಭಕ್ತರು ಕೊಟ್ಟಿರುವುದು ಸಮರ್ಪಣೆ ಭಾವದಿಂದ ಅಷ್ಟೆ. ರೂ. 3,300 ಕೋಟಿಯಷ್ಟು ದೇಣಿಗೆ ಸಂಗ್ರಹವಾಗಿತ್ತು. ರಾಷ್ಟ್ರದ ಮೂಲೆಮೂಲೆಯ 11,500 ಲಕ್ಷ ಜನರು ತಮ್ಮ ಭಕ್ತಿ ಸಮರ್ಪಿಸಿದ್ಧಾರೆ’ ಎಂದು ಹೇಳಿದರು.
`ಅಜ್ಜಿಯೊಬ್ಬರು ಎಂಟು ರೂಪಾಯಿ ನೀಡಿ ಮಂದಿರ ನಿರ್ಮಾಣಕ್ಕೆ ನೆರವಾಗಿದ್ದು, ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದಿವೆ’ ಎಂದು ಹೇಳಿದರು.
ಸಾಂಸ್ಕೃತಿಕ ರಾಜಧಾನಿಯಾಗಬೇಕು: ರಾಮಮಂದಿರ ನಿರ್ಮಾಣದ ಬುನಾದಿ ಕೆಲಸ ಮುಗಿದಿದೆ. ಭೂಮಿಯ ಒಳಭಾಗಕ್ಕೆ ಮಾತ್ರ ಸಿಮೆಂಟ್ ಬಳಕೆ ಮಾಡಲಾಗಿದೆ. ಸಾವಿರಾರು ವರ್ಷ ಈ ಮಂದಿರ ಶಾಶ್ವತವಾಗಿ ಉಳಿಯಬೇಕು. ಅದಕ್ಕೆ ಮೇಲ್ಭಾಗದಲ್ಲಿ ಕಬ್ಬಿಣ ಹಾಗೂ ಸಿಮೆಂಟ್ ಯಾವುದನ್ನೂ ಬಳಸುತ್ತಿಲ್ಲ. ಅಯೋಧ್ಯೆ ಸಾಂಸ್ಕೃತಿಕ ರಾಜಧಾನಿ ಆಗಬೇಕು ಎಂದು ಗೋಪಾಲ್ ಹೇಳಿದರು.
ಮಡಿಕೇರಿ ಅಶ್ವಿನಿ ಆಸ್ಪತ್ರೆಯು ಜಿಲ್ಲೆಯ ಜನರಿಗೆ ಆರೋಗ್ಯ ಸೇವೆ ಕಲ್ಪಿಸುತ್ತಿದೆ. ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಸೇವೆ ರೋಗಿಗಳಿಗೆ ಸಿಗಬೇಕು. ಕೋವಿಡ್ ವೇಳೆ ಅಶ್ವಿನಿ ಆಸ್ಪತ್ರೆಯನ್ನೇ ಜಿಲ್ಲಾ ಆಸ್ಪತ್ರೆಗೆ ಬಿಟ್ಟುಕೊಡಲಾಗಿತ್ತು. ಸೇವೆ ಸಂಘದ ಕನಸು ಎಂದು ತಿಳಿಸಿದರು.
ಬಜರಂಗದಳವು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯ ತಡೆಯಿತು. ಅದು ಮಾತ್ರವಲ್ಲದೇ ಗೋವು ರಕ್ಷಣೆ ಮಾಡಿತ್ತು. ಜಾತಿಗಳ ನಡುವೆ ಭೇದಭಾವ ತೋರಬಾರದು ಎಂದು ಸಂದೇಶವನ್ನು ಉಡುಪಿಯಲ್ಲಿ ನಡೆದಿದ್ದ ವಿಎಚ್‍ಪಿ ಸಮ್ಮೇಳನ ನೀಡಿತ್ತು. ಆರೋಗ್ಯ ಹಾಗೂ ಶಿಕ್ಷಣಕ್ಕೂ ಹೆಚ್ಚಿನ ಪ್ರಾಶಸ್ತ್ಯ ಕಲ್ಪಿಸಲಾಗುತ್ತಿದೆ ಎಂದು ನುಡಿದರು.
ಥಾಯ್ಲೆಂಡ್ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸುಶೀಲ್ ಸರಾಫ್ ಅವರು ಮಾತನಾಡಿ, `ಅಶ್ವಿನಿ ಆಸ್ಪತ್ರೆಯು ಉತ್ತಮ ಆರೋಗ್ಯ ಸೇವೆ ಕಲ್ಪಿಸುತ್ತಿದೆ. 1972ರಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ’ ಎಂದು ಶ್ಲಾಘಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ: ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಿವೆ. ಗ್ರಾಮೀಣ ಪ್ರದೇಶಕ್ಕೂ ಆರೋಗ್ಯ ಸೇವೆ ಲಭಿಸುತ್ತಿದೆ. ಇಡೀ ವಿಶ್ವದಲ್ಲಿಯೇ 100 ಕೋಟಿ ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿದ ಮೊದಲ ರಾಷ್ಟ್ರ ಭಾರತ’ ಎಂದು ಶ್ಲಾಘಿಸಿದರು.
ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ 5 ಲಕ್ಷ ಕಾರ್ಯಕರ್ತರು ಸೇವೆ, ದೇಶದ ಸುರಕ್ಷತೆಗೆ ಶ್ರಮಿಸುತ್ತಿದ್ಧಾರೆ. ರಕ್ತದಾನ ಶಿಬಿರ, ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಬಜರಂಗಳ ಕೆಲಸ ಮಾಡುತ್ತಿದೆ ಎಂದು ಸುಶೀಲ್ ಸರಾಫ್ ಹೇಳಿದರು.
ವಿಶ್ವ ಹಿಂದೂ ಪರಿಷದ್ ರಾಷ್ಟ್ರೀಯ ಉಪಾಧ್ಯಕ್ಷೆ ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, `ಕೊಳಚೆ ಪ್ರದೇಶದ ನಿವಾಸಿಗಳಲ್ಲಿ ಜಾಗೃತಿ ಮೂಡಿದರೆ ರಾಷ್ಟ್ರ ಮತ್ತಷ್ಟು ಬಲಿಷ್ಠವಾಗಲಿದೆ. ಜನರು ಅಸೂಯೆ ಹಾಗೂ ಚಿಂತೆ ಬಿಡಬೇಕು. ಚಿಂತೆ ಮಾಡುವವರಿಗೆ ಹೆಚ್ಚು ರೋಗಗಳು ಬರುತ್ತವೆ’ ಎಂದು ಹೇಳಿದರು.
ಸೇವಾ ಕೇಂದ್ರದ ತಂಡದ ಸದಸ್ಯ ಮಧುಕರ್ ದೀಕ್ಷಿತ್ ಮಾತನಾಡಿ, 1964ರಲ್ಲಿ ವಿಎಚ್‍ಪಿ ಸ್ಥಾಪನೆ ಆಯಿತು. ಧರ್ಮ ರಕ್ಷಣೆ ಮಾರ್ಗದಲ್ಲಿ ವಿಎಚ್‍ಪಿ ಸಾಗುತ್ತಿದೆ. ಹಿಂದೂ ಧರ್ಮದಿಂದ ಹೊರಗೆ ಹೋಗುವವರನ್ನು ತಡೆಯಬೇಕು ಎಂದು ಮೊದಲು ಕೆಲಸ ಮಾಡಿತ್ತು. ಅದರ ಪ್ರೇರಣೆಯಿಂದ ಅನೇಕ ಸಂಸ್ಥೆಗಳು ಈ ಕೆಲಸ ಆರಂಭಿಸಿದ್ದವು’ ಎಂದು ಹೇಳಿದರು.
ಕನಿಷ್ಟ ದರದಲ್ಲಿ ಆರೋಗ್ಯ ಸೇವೆ: ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ರಾಜಪ್ಪ ಮಾತನಾಡಿ, ಗುಡ್ಡಗಾಡು ಪ್ರದೇಶ ಜನರಿಗೆ ಕನಿಷ್ಟ ದರದಲ್ಲಿ ಆರೋಗ್ಯ ಸೇವೆ ಕಲ್ಪಿಸುವ ಉದ್ಧೇಶದಿಂದ ಮೊದಲು ಆಸ್ಪತ್ರೆ ಸ್ಥಾಪನೆ ಆಯಿತು. ಹಲವರು ದೇಣಿಗೆ ನೀಡಿದ್ದರು. ಇಂದು ಜನರಿಗೆ ಡಯಾಲಿಸಿಸ್ ಸೇವೆಯನ್ನು ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗಿದ್ದೇವೆ. ಕೋವಿಡ್ ವೇಳೆ ಇಡೀ ಆಸ್ಪತ್ರೆಯನ್ನೇ ಜಿಲ್ಲಾಡಳಿತಕ್ಕೆ ವಹಿಸಲಾಗಿತ್ತು. ಸಾವಿರಾರು ಮಂದಿ ಆರೋಗ್ಯ ಸೇವೆ ಪಡೆದುಕೊಂಡರು. ಮುಂದೆ ಹೆರಿಗೆ ವಿಭಾಗ ಹಾಗೂ ಮಕ್ಕಳ ಪ್ರತ್ಯೇಕ ಘಟಕ ಆರಂಭಿಸುವ ಉದ್ಧೇಶವಿದೆ ಎಂದು ಹೇಳಿದರು.
ಸ್ತ್ರೀ ರೋಗ ತಜ್ಞೆ ಡಾ.ರಜನಿ ಸರಿನ್, ಶ್ರುತ್ ಮತ್ತು ಸ್ಮೀತ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಕರಣ್ ಕುಮಾರ್ ಹಾಜರಿದ್ದರು. ಛಾಯಾ ನಂಜಪ್ಪ ಪ್ರಾಸ್ತಾವಿಕ ನುಡಿಯಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss