ರಾಷ್ಟ್ರೀಯ ಪುನರುತ್ಥಾನಕ್ಕಾಗಿ ರಾಮಮಂದಿರ: ಆರೆಸ್ಸೆಸ್ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಂಪನ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:
‘ರಾಷ್ಟ್ರೀಯ ಪುನರುತ್ಥಾನಕ್ಕಾಗಿ ರಾಮಮಂದಿರ’ ಎಂಬ ನಿರ್ಣಯವನ್ನು ಕೈಗೊಳ್ಳುವ ಮೂಲಕ ನಾಗಪುರದ ರೇಶಿಂಬಾಗ್ ಸ್ಮೃತಿಭವನದಲ್ಲಿ ನಡೆದ ಮೂರು ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಂಪನ್ನಗೊಂಡಿದೆ.
ಈ ಸಂದರ್ಭ ಮಾತನಾಡಿದ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಹಲವು ವರ್ಷಗಳ ಕಾಲ ಸಂಘದ ಕಾರ್ಯಕರ್ತ, ಸ್ವಯಂಸೇವಕರು ಮತ್ತು ಸಂಪೂರ್ಣ ಹಿಂದೂ ಸಮಾಜ ಈ ರಾಷ್ಟ್ರದ ಸಭ್ಯತೆ ಮತ್ತು ಸಂಸ್ಕೃತಿಯ ಅಸ್ಮಿತೆಯ ಪ್ರತೀಕವಾದ ಯಾವ ರಾಮಜನ್ಮಭೂಮಿ ಮತ್ತು ಅಲ್ಲೊಂದು ಮಂದಿರ ನಿರ್ಮಾಣದ ಕನಸನ್ನು ಕಂಡು ಆಗ್ರಹಪೂರ್ವಕವಾಗಿ ಅದಕ್ಕಾಗಿ ಶ್ರಮಿಸಿದ್ದರೋ ಅದು ಇಂದು ನನಸಾಗಿದೆ. ಶ್ರೀರಾಮ ಭಾರತೀಯ ನಾಗರಿಕತೆಯ ಸಂಕೇತ, ರಾಮಮಂದಿರ ನಮ್ಮ ಸಂಸ್ಕೃತಿಯ ಅಸ್ಮಿತೆ ಎನ್ನುವುದನ್ನು ಜನವರಿ ೨೨, ೨೦೨೪ರಂದು ನಡೆದ ರಾಮಲಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ಸಾಕ್ಷೀಕರಿಸುತ್ತದೆ. ಆನಂದದ ಸಂಗತಿಯೆಂದರೆ ದೇಶಾದ್ಯಂತ ಸ್ವಯಂಸೇವಕರು ಮತ್ತು ರಾಮಮಂದಿರದ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕಾಗಿ ಕೈಜೋಡಿಸಿದವರ ಪ್ರಯತ್ನದ ಫಲವಾಗಿ ಸುಮಾರು ೨೦ ಕೋಟಿ ಮನೆಗಳ ಸಂಪರ್ಕ ಮಾಡಲಾಗಿದೆ. ಇದರಿಂದಾಗಿ ಜಗತ್ತಿನ ಇತಿಹಾಸದಲ್ಲಿ ೧೫ ದಿನಗಳ ಕಾಲ ನಡೆದ ಅಭಿಯಾನವೊಂದು ಇಷ್ಟು ವ್ಯಾಪಕವಾಗಿ ಜನಸಂಪರ್ಕವನ್ನು ಸಾಧಿಸುವ ದಾಖಲೆಯನ್ನು ಸಹಜವಾಗಿ ನಿರ್ಮಿಸಲು ಸಾಧ್ಯವಾಗಿದೆ. ಇದು ಸಾಧ್ಯವಾಗಿದ್ದು ಎರಡು ಕಾರಣಗಳಿಂದಾಗಿ. ಮೊದಲನೆಯದ್ದು ಮಂದಿರ ನಿರ್ಮಾಣದ ರಾಷ್ಟ್ರೀಯ ಅಭಿಯಾನದಲ್ಲಿ ರಾಷ್ಟ್ರದ ಜನ ಸಹರ್ಷದಿಂದ ಕೈಜೋಡಿಸಿದ್ದು ಮತ್ತು ಎರಡನೇ ಕಾರಣ ಪ್ರತಿ ಮನೆಗೂ ಈ ವಿಷಯವನ್ನು ತಲುಪಿಸಬಲ್ಲ ಸಂಘದ ಸಂಘಟನಾ ಸಂಪರ್ಕದ ಜಾಲ. ಹಾಗಾಗಿ ಸಮಾಜದ ಕಾರ್ಯವನ್ನು ಸಮಾಜವೇ ಮಾಡಿರುವುದರಿಂದ, ರಾಷ್ಟ್ರದ ಕಾರ್ಯವನ್ನು ರಾಷ್ಟ್ರವೇ ಜೊತೆಯಾಗಿ ಸಾಧಿಸಿದ್ದರಿಂದ ನಾವೆಲ್ಲರೂ ಪರಸ್ಪರ ಅಭಿನಂದನೆಗಳನ್ನು ಸಲ್ಲಿಸಿಕೊಳ್ಳಬೇಕಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!