ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅತ್ಯಂತ ಸಂತಸದ ವಿಚಾರ. ಅಲ್ಲಿಗೆ ಎಲ್ಲರೂ ಹೋಗಬೇಕು, ಆದರೆ ರಾಜಕೀಯ ವಾತಾವರಣ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿಗಳು ಕೂಡ ರಾಜಕೀಯ ವಾತಾವರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಮಮಂದಿರ ವಿಷಯದಲ್ಲಿ ಪಾಲಿಟಿಕಲ್ ಕ್ಯಾಂಪೇನ್ ಆಗಬಾರದು, ನಮಗೆಲ್ಲರಿಗೂ ಅಲ್ಲಿಗೆ ಹೋಗಲು ಆಸೆ ಇದೆ ಎಂದರು.
ಮಂದಿರ ನಿರ್ಮಾಣ ಒಳ್ಳೆಯ ಬೆಳವಣಿಗೆ. ರಾಮಮಂದಿರಕ್ಕೆ ತೆರಳಲು ಯಾರ ಅನುಮತಿಯೂ ಬೇಕಾಗಿಲ್ಲ, ಅಲ್ಲಿಗೆ ಪ್ರತಿಷ್ಠಾ ದಿನವೇ ಹೋಗಬೇಕು ಎಂದೇನಿಲ್ಲ. ದೇವಸ್ಥಾನಗಳಲ್ಲಿ ಪ್ರತಿಷ್ಠಾ ದಿನ ವಿಶೇಷ ಪ್ರಾರ್ಥನೆ, ಪೂಜೆ ನೆರವೇರಿಸುವಂತೆ ಸೂಚಿಸಲಾಗಿದೆ. ಮಂದಿರ ಬಗ್ಗೆ ಎಲ್ಲರಿಗೂ ಗೌರವ ಇದೆ, ಆದರೆ ಅದರಲ್ಲಿ ರಾಜಕಾರಣ ಬೆರೆಸಬಾರದು. ಆದರೆ ರಾಜಕೀಯ ಲಾಭ ಮತ್ತು ಚುನಾವಣೆಗೋಸ್ಕರ ಅದನ್ನು ಬಳಸಲಾಗುತ್ತಿದೆ. ದೇವಸ್ಥಾನಗಳು ಇರುವುದು ನಮಗಾಗಿ, ಭಕ್ತಿ ಇರುವವರು ದೇವಸ್ಥಾನಕ್ಕೆ ಹೋಗುತ್ತಾರೆ.ಸ್ವ ಇಚ್ಛೆಯಿಂದ ಎಲ್ಲರೂ ಹೋಗುತ್ತಾರೆ, ಹೋಗದಿದ್ದರೆ, ಟೀಕೆ ಮಾಡಬಾರದು ಎಂದು ಗುಂಡೂರಾವ್ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ. ಆದರೆ ಅವರು ಈವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ. ಈ ಬಗ್ಗೆ ತನಿಖಾ ಸಮಿತಿಗೆ ದಾಖಲೆ ಸಲ್ಲಿಸುವಂತೆ ಯತ್ನಾಳ್‌ಗೆ ಮೌಖಿಕವಾಗಿ ತಿಳಿಸಲಾಗಿದೆ. ಆರೋಪ ಮಾಡುವ ಜತೆಗೆ ತನಿಖಾ ಸಮಿತಿ ಮುಂದೆ ದಾಖಲೆ ನೀಡುವಂತೆ ಹೇಳಲಾಗಿದೆ. ತನಿಖಾ ಆಯೋಗದ ವಿಚಾರಣೆ
ವೇಳೆ ದಾಖಲೆ ನೀಡಿದರೆ ಉಪಯೋಗವಾಗುತ್ತದೆ ಎಂದರು.
ಹಾಲಿ ಸರ್ಕಾರದಲ್ಲಿ ಡಿಸಿಎಂ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ, ಅದೆಲ್ಲ ಪಕ್ಷದ ಆಂತರಿಕ ವಿಚಾರ. ಡಿಸಿಎಂ ಹುದ್ದೆಗೆ ನನ್ನ ಹೆಸರು ಏನೂ ಇಲ್ಲ, ಅದೆಲ್ಲ ಹೈಕಮಾಂಡ್ ನಿರ್ಧಾರ ಗುಂಡೂರಾವ್ ಹೇಳಿದರು.