ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಪವಿತ್ರ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಇದೇ ವರ್ಷ ಸಾರ್ವತ್ರಿಕ ಚುನಾವಣೆಯೂ ನಡೆಯಲಿದೆ. ಈ ಎರಡೂ ಹೊಸ ವರ್ಷದ ಶುಭ ಸೂಚನೆಗಳು ಎಂದು ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಶಾಂತಿ ಮಾತ್ರವಲ್ಲ, ‘ರಾಮ ರಾಜ್ಯ’ವೂ ಬರುತ್ತಿದೆ. ಪವಿತ್ರ ಸ್ಥಳದಲ್ಲಿ ಶ್ರೀರಾಮನೂ ನೆಲೆಗೊಳ್ಳಲಿದ್ದಾನೆ. ದುಃಖ, ನೋವು, ಒತ್ತಡಗಳು ದೂರವಾಗಿ, ಎಲ್ಲರೂ ಸಂತಸದಿಂದ ಇರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊಸ ವರ್ಷದ ಪ್ರಯುಕ್ತ ದೇಶದ ನಾಗರಿಕರಿಗೆ ಶುಭಾಶಯ ಕೋರುತ್ತಾ ಹಾರೈಸುತ್ತೇನೆ. ಈ ಹೊಸ ವರ್ಷವು ತುಂಬಾ ಮಹತ್ವಪೂರ್ಣವಾದದ್ದು. ಇದೇ ತಿಂಗಳು (ಜನವರಿ) 22ರಂದು ಪವಿತ್ರ ಸ್ಥಳದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಇದು ದೇಶದ ಜನರಿಗೆ ಶ್ರೇಯಸ್ಕರವಾಗಲಿದೆ. ಶ್ರೀರಾಮನು ಎಲ್ಲರ ಬಾಳಲ್ಲಿ ಸಿಹಿ ತರಲಿದ್ದಾನೆ. ಈ ವರ್ಷ ಶುಭಕರವಾಗಿರಲಿದೆ’ ಎಂದು ಅರ್ಚಕ ಅಭಿಪ್ರಾಯಪಟ್ಟಿದ್ದಾರೆ.
ಕಳೆದುಹೋಗಿರುವ ಶಾಂತಿ ರಾಮ ಮಂದಿರ ನಿರ್ಮಾಣದ ಬಳಿಕ ಮತ್ತೆ ನೆಲೆಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತ್ಯೇಂದ್ರ ದಾಸ್, ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಐತಿಹಾಸಿಕ ತೀರ್ಪು ಹೊರಬಿದ್ದ ಬಳಿಕ ಅಯೋಧ್ಯೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಸಾಕಷ್ಟು ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ ಎಂದಿದ್ದಾರೆ.
‘ಅಭಿವೃದ್ಧಿ ಕಾರ್ಯಗಳಿಂದ ಅಯೋಧ್ಯೆಗೆ ಅನುಕೂಲವಾಗಿದೆ. ವಿಮಾನ ನಿಲ್ದಾಣ ಬಂದಿದೆ. ಹೊಸ ರೈಲು ನಿಲ್ದಾಣ ನಿರ್ಮಾಣವಾಗಿದೆ. ರಾಮ ಪಥ ಅಭಿವೃದ್ಧಿಗೊಂಡಿದೆ. ಸಾಕಷ್ಟು ರಸ್ತೆಗಳ ನಿರ್ಮಾಣಕ್ಕೆ ಪ್ರಸ್ತಾಪಿಸಲಾಗಿದೆ. ಈ ಯೋಜನೆಗಳಿಂದಾಗಿ ಅಯೋಧ್ಯೆ ಭವ್ಯರೂಪ ಪಡೆದಿದೆ. ಹೊರಗಿನಿಂದ ಸಾಕಷ್ಟು ಜನರು ಬಂದು ‘ದರ್ಶನ’ ಪಡೆಯಲಿದ್ದಾರೆ’ ಎಂದು ವಿವರಿಸಿದ್ದಾರೆ.