ಹೊಸದಿಗಂತ ಡಿಜಿಟಲ್ ಡೆಸ್ಕ್
ಅಯೋಧ್ಯೆ: ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾದ ನಂತರ ಅಯೋಧ್ಯೆಯಲ್ಲಿ ಪ್ರಥಮ ಬಾರಿಗೆ ಶ್ರೀರಾಮನ ಜನ್ಮದಿನದಂದು ವೈಭವಯುತವಾಗಿ ರಾಮನವಮಿ ಆಚರಿಸಲಾಗುತ್ತಿದೆ. ಏ. 3ರಿಂದ 10ರವರೆಗೆ ರಾಮ ನವಮಿ ಆಚರಣೆ ಇರಲಿದೆ.
1992 ಡಿಸೆಂಬರ್ 6ರ ಘಟನೆಯ ನಂತರ ಸಣ್ಣದೊಂದು ಗುಡಾರದಲ್ಲಿ ಕುಳಿತಿದ್ದ ರಾಮಲಲ್ಲಾನ ಪೂಜೆ, ಹಬ್ಬಗಳು ಮತ್ತು ಉತ್ಸವಗಳು ಎಲ್ಲಾ ನಿರ್ಬಂಧಗಳಿಂದ ಕೇವಲ ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿದ್ದವು. ಕಳೆದ ಎರಡು ವರ್ಷಗಳಲ್ಲಿ ಸಾಂಕ್ರಾಮಿಕ ಕೋವಿಡ್ ಬಾಧಿಸಿತ್ತು. ಈಗ ಪರಿಸ್ಥಿತಿ ಬದಲಾಗಿದೆ, ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ತಾತ್ಕಾಲಿಕ ಮಂದಿರದಲ್ಲಿ ಕುಳಿತ ರಾಮಲಲ್ಲಾನ ವೈಭವ ನಿರಂತರವಾಗಿ ವೃದ್ಧಿಯಾಗುತ್ತಿದೆ.
ರಜತ ಸ್ತಂಭದ ಮೇಲೆ ಕಲಶ ಸ್ಥಾಪನೆ
ನವರಾತ್ರಿಯಲ್ಲಿ ರಾಮಲಲ್ಲಾನ ಮುಂದೆ ಕಲಶ ಸ್ಥಾಪಿಸುವ ಸಂಪ್ರದಾಯ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿ ರಾಮಲಲ್ಲಾನ ಸನ್ನಿಧಿಯಲ್ಲಿ ನವರಾತ್ರಿಯ ಕಲಶವನ್ನು ಕಾಷ್ಠ ಸ್ತಂಭದ ಮೇಲಲ್ಲ, ಬೆಳ್ಳಿಯ ಕಂಬದ ಮೇಲೆ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಪೂಜೆ ನಡೆಯಲಿದೆ. ಮಧ್ಯಪ್ರದೇಶದ ಭಕ್ತರು ಒಂದುವರೆ ಕೆಜಿ ಬೆಳ್ಳಿ ಚರಣಪಾದುಕೆ ಮತ್ತು ಆಭರಣ ಹಾಗೂ ಬೆಳ್ಳಿಯ ಕಂಬವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸಿದ್ದಾರೆ. ಅದನ್ನು ರಾಮ ನವಮಿ ಸಂದರ್ಭದಲ್ಲಿ ಇರಿಸಿ ಪೂಜೆ ಮಾಡಲಾಗುತ್ತದೆ.
56 ಬಗೆಯ ನೈವೇದ್ಯ ಅರ್ಪಣೆ
ರಾಮಲಲ್ಲಾನ ಜನ್ಮದಿನವಾದ ರಾಮನವಮಿಯಂದು ಗರ್ಭಗುಡಿಯನ್ನು ಹೂವಿನಿಂದ ಅಲಂಕರಿಸಿ, 56 ಬಗೆಯ ನೈವೇದ್ಯ (ಭೋಗ್) ಅರ್ಪಿಸಲಾಗುತ್ತದೆ. ರಾಮಲಲ್ಲಾ ಸಹಿತ ನಾಲ್ವರು ಸಹೋದರರು ಹೊಸ ವಸ್ತ್ರ, ಚಿನ್ನದ ಕಿರೀಟವನ್ನು ಧರಿಸುತ್ತಾರೆ. ಈ ಅನುಕ್ರಮದಲ್ಲಿ ಐನೂರು ವರ್ಷಗಳ ನಂತರ ರಾಮಲಲ್ಲಾನ ಆಸ್ಥಾನದಲ್ಲಿ ನವರಾತ್ರಿಯ ಆರಾಧನೆಯೂ ವೈಭವದಿಂದ ನೆರವೇರಲಿದೆ. ಅಷ್ಟೇ ಅಲ್ಲದೇ ಇದೇ ಮೊದಲ ಬಾರಿಗೆ ದೇವರಿಗೆ ನೈವೇದ್ಯ ಮಾಡಿದ ಖಾದ್ಯಗಳನ್ನು ಭಕ್ತರಿಗೆ ಹಂಚಲಾಗುತ್ತದೆ.
ದರ್ಶನದ ಅವಧಿ ವಿಸ್ತರಣೆ
ಈ ಬಾರಿ ಕೊರೋನಾ ವೈರಸ್ ಭೀತಿಯಿಲ್ಲದ ಕಾರಣ, ರಾಮ ನವಮಿಯ ಅವಧಿಯಲ್ಲಿ ಏ. 8ರಿಂದ 10ರವರೆಗೆ 3 ದಿನಗಳಲ್ಲಿ 10 ರಿಂದ 15 ಲಕ್ಷ ಜನರು ಅಯೋಧ್ಯೆಗೆ ಬರುವ ನಿರೀಕ್ಷೆಯಿದೆ. ಆದ್ದರಿಂದ ಭಕ್ತರು ರಾಮಲಲ್ಲಾ ದರ್ಶನದಿಂದ ವಂಚಿತರಾಗಬಾರದೆಂದು ದರ್ಶನದ ಅವಧಿಯನ್ನು 3 ತಾಸುಗಳ ಕಾಲ ವಿಸ್ತರಿಸಲಾಗಿದೆ. ಇಲ್ಲಿಯವರೆಗೆ ದರ್ಶನವು ಬೆಳಗ್ಗೆ 7ರಿಂದ 10 ಗಂಟೆಯವರೆಗೆ, ಮಧ್ಯಾಹ್ನ 2ರಿಂದ ಸಂಜೆ 6 ಗಂಟೆವರೆಗೆ ಇರುತ್ತಿತ್ತು. ಅದನ್ನು ರಾಮ ನವಮಿ ಸಂದರ್ಭ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ 11.30ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 7.30 ರವರೆಗೆ ವಿಸ್ತರಿಸಲಾಗಿದೆ. ರಾಮನವಮಿಯ ಮೊದಲ ದಿನವಾದ ಏ. 3ರಿಂದ ಈ ಸಮಯದ ಬದಲಾವಣೆಯಾಗಲಿದೆ, ಇದು ರಾಮನವಮಿಯವರೆಗೆ ಇರುತ್ತದೆ.