ರಾಮ, ಪಾಂಡವರಿಗೂ ವನವಾಸ ತಪ್ಪಲಿಲ್ಲ, ನಾನು ಅವರಿಗಿಂತ ದೊಡ್ಡವನಾ?: ಸಿಟಿ ರವಿ

ಹೊಸದಿಗಂತ ವರದಿ,ಹಾಸನ :

ಬಿಜೆಪಿ ಪಕ್ಷ ಒಂದು ಹಂತದವರೆಗೆ ಬೆಳೆದಿದೆ, ಅದನ್ನು ವಿಸ್ತರಿಸುವ ಜವಾಬ್ದಾರಿ ಬಿ.ವೈ‌ ವಿಜಯೇಂದ್ರ ಅವರಿಗೆ ಇದೆ. ಅವರ ರಾಜಕೀಯ ಅನುಭವ, ಜಾಣ್ಮೆ ಪಕ್ಷ ಕಟ್ಟಲು ನೆರವಾಗಲಿ‌ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟರು.

ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಾವಳಿ ಎಂದರೆ ಬೆಳಕಿನ ಹಬ್ಬ, ಅಧರ್ಮದ ವಿರುದ್ಧ ಧರ್ಮದ ವಿಜಯ ಆಗಬೇಕು, ಅಸತ್ಯದ ವಿರುದ್ಧ ಸತ್ಯದ ವಿಜಯ ಆಗಬೇಕು, ಎಲ್ಲಾ ಜೀವಜಂತುಗಳು ಕೂಡ ಸುಖವಾಗಿರಬೇಕು, ಕತ್ತಲು ದೂರವಾಗಿ ಜ್ಞಾನದ ಬೆಳಕು ಬರಲೆಂದು ಪ್ರಾರ್ಥಿಸುತ್ತೇನೆ. ಪ್ರತಿ ವರ್ಷದಂತೆ ಈ ಬಾರಿಯೂ ತಾಯಿ ಹಾಸನಾಂಬೆಯ ದರ್ಶನವನ್ನು ಮಾಡಿದ್ದೇನೆ.
ತಾಯಿ ಹಾಸನಾಂಬೆ ಎಲ್ಲಾ ಸಜ್ಜನ ಶಕ್ತಿಗಳನ್ನು ಕಾಪಾಡಲಿ ದುರ್ಜನ ಶಕ್ತಿಯನ್ನು ನಿಗ್ರಹಿಸಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾದ್ಯಕ್ಷರಾಗಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. ಪಕ್ಷ ಒಂದು ಹಂತದವರೆಗೆ ಬೆಳೆದಿದೆ, ಅದನ್ನು ವಿಸ್ತರಿಸುವ ಜವಾಬ್ದಾರಿ ಅವರಿಗೆ ಇದೆ. ರಾಜಕೀಯ ಅನುಭವ, ಜಾಣ್ಮೆ ಪಕ್ಷ ಕಟ್ಟಲು ನೆರವಾಗಲಿ. ಕಾಂಪಿಟೇಷನ್ ಇಟ್ಟಿರಲಿಲ್ಲ, ಹಾಗಾಗಿ ರೇಸ್‌ನಲ್ಲಿ ಇರುವ ಪ್ರಶ್ನೆಯೇ ಇಲ್ಲ. ನಾನೂಂತು ಹಿಂದೆಯೂ ಯಾವುದೇ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ. ಜವಾಬ್ದಾರಿಗಳೆಲ್ಲಾ ಅಚಾನಕ್ಕಾಗಿ, ತಾನಾಗಿಯೇ ಒದಗಿ ಬಂದ್ದದ್ದು. ಈಗ ಯಾವುದೇ ಜವಾಬ್ದಾರಿ ಇಲ್ಲ, ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದರು.

ನಾನು ಅಂದುಕೊಂಡಿದ್ದೀನಿ ರಾಮನಿಗೂ ವನವಾಸ ತಪ್ಪಲಿಲ್ಲ, ಪಾಂಡವರಿಗೂ ವನವಾಸ ತಪ್ಪಲಿಲ್ಲ. ಇನ್ನೂ ಸಿ.ಟಿ.ರವಿ ರಾಮನಗಿಂತ, ಪಾಂಡವರಿಗಿಂತ ದೊಡ್ಡವನಾ. ನಾನು ಅದರ‌ ಲೆಕ್ಕಕ್ಕೆ ಸೇರಿಕೊಂಡವನು ಎಂದು ಕೊಂಡಿದ್ದೇನೆ. ನಾನು ಜವಾಬ್ದಾರಿ ಕಾರಣಕ್ಕೆ ಹೇಳ್ತಿದ್ದಿನಿ, ಮುಂಚೆ ಪದಾಧಿಕಾರಿಯಾಗಿ ಕೆಲಸ‌ ಮಾಡುತ್ತಿದ್ದೆ, ಈಗ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ
ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು‌

ಈ ಮಧ್ಯಪ್ರದೇಶದಲ್ಲಿ ಚುನಾವಣೆ ಜವಾಬ್ದಾರಿ ಕೊಟ್ಟಿದ್ದಾರೆ. ಇವರಿಗೆ ಜವಾಬ್ದಾರಿ ಕೊಟ್ಟಗಾ ಮಾತನಾಡಿದರೆ ತಪ್ಪು ಸಂದೇಶಗಳು ಹೋಗುತ್ತವೆ.
ನಾವು ತಪ್ಪು ಸಂದೇಶ ಕೊಡಲು ಬಯಸುವುದಿಲ್ಲ . ಯಾವಾಗಲೂ ಪಕ್ಷ ಗಟ್ಟಿಯಾಗಲಿ ಅಂತ ಬಯಸುವವನು. ಯಾರ ಮೂಲಕ ಗಟ್ಟೆಯಾಗಬೇಕು ಅನ್ನುವುದು ಚರ್ಚೆಯ ವಿಷಯವಲ್ಲ. ನಮ್ಮ ಪಕ್ಷ ಕಾಲ ಕಾಲಕ್ಕೆ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಅನುಭವ ಇದ್ದವರಿಗೆ ಕೊಟ್ಟಿದೆ ಅನುಭವ ಇಲ್ಲದಿದ್ದವರಿಗೂ ಕೊಟ್ಟಿದೆ. ಅದನ್ನು ಚರ್ಚೆ ವಿಷಯ ಮಾಡಲು ಬಯಸಲ್ಲ. ಯಾರಿಗೆ ಏನು ಇದೆಯೋ‌ ಗೊತ್ತಿಲ್ಲ ನನಗಂತು ಅಸಮಾಧಾನ ಇಲ್ಲ. ಪಕ್ಷದ ಜವಾಬ್ದಾರಿ ಕೇಳಿ ಪಡೆಯುವುದಲ್ಲ, ಹಾಗಾಗಿ ನಾನು ಕೇಳಲು ಯಾವತ್ತು ಹೋಗಿಲ್ಲ . ನಾನು ಸಿದ್ದಾಂತನ‌ ನಂಬಿ ಕೆಲಸ ಮಾಡುತ್ತಾ ಬಂದಿದ್ದೀನಿ. ಕೊಡೊದನ್ನೆಲ್ಲಾ ಭಗವಂತನ ಹತ್ತಿರ ಕೇಳೋದು ನನ್ನ ಕೆಲಸ. ಹಾಗೆ ಪಾರ್ಟಿಯ ವರಿಷ್ಠರಿಗೆ ಯಾರಿಗೆ ಯಾವಾಗ ಏನು ಕೊಡಬೇಕು ಅವರಿಗೆ ಬಿಟ್ಟದ್ದು ಈಗ ಯಾವುದೇ ವಿಷಯಗಳಲ್ಲಿ ನಾನಿಲ್ಲ ಎಂದು ಹೇಳಿದರು.

ನ.15 ರ ಬಳಿಕ ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬರ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈಗ ಇರುವ ಕಾಂಗ್ರೆಸ್ಸಿನವರನ್ನೇ ಸಮಾಧಾನವಾಗಿ ಇಟ್ಟುಕೊಳ್ಳಲು ಆಗ್ತಲ್ಲ‌. ಒಬ್ಬ ಸಚಿವರು ದುಬೈ ಅಂತಾರೆ, ಅದಕ್ಕೂ ಮುಂಚೆ ಮೈಸೂರಿಗೆ ಅಂತ ಹೇಳ್ತಾರೆ. ಅವರಿಗೆ ಸಮಾಧಾನದಲ್ಲಿ ಇಟ್ಟುಕೊಳ್ಳಲು ಆಗ್ತಿಲ್ಲ. ಇರುವವರನ್ನೇ ಸಮಾಧಾನದಲ್ಲಿ ಇಟ್ಟುಕೊಳ್ಳಲು ಆಗದಿರುವವರು ಕರೆದುಕೊಂಡು ಹೋದವರಿಗೆ ಏನು ಕೊಡುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!