ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಡಾಯದ ಬಾವುಟ ಹಾರಿಸಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿಯನ್ನು ಸಮಾಧಾನಪಡಿಸಲು ಸಿಎಂ ಡಿ.ಕೆ. ಶಿವಕುಮಾರ್ ಮಧ್ಯರಾತ್ರಿ ಭಾರಿ ಕಸರತ್ತು ನಡೆಸಿದ್ದಾರೆ. ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ 2.5 ಗಂಟೆಗಳ ಸುದೀರ್ಘ ರಹಸ್ಯ ಸಂಧಾನ ಸಭೆಯಲ್ಲಿ ಹಲವು ಮಹತ್ವದ ಚರ್ಚೆಗಳು ನಡೆದಿದ್ದು, ರಾಜೀನಾಮೆ ಹಿಂಪಡೆಯುವ ವಿಚಾರ ಮಾತ್ರ ಇನ್ನು ಸಸ್ಪೆನ್ಸ್ ಆಗಿಯೇ ಉಳಿದಿದೆ.
ಜಯನಗರದ ಹೋಟೆಲ್‌ನಲ್ಲಿ ಹೈಡ್ರಾಮಾ
ಖಾತೆ ಹಂಚಿಕೆ ಪ್ರಕಟವಾದ ತಕ್ಷಣವೇ ತೀವ್ರ ಅಸಮಾಧಾನಗೊಂಡ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ರವಾನಿಸಿದ್ದರು. ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಡೆಯಲು ತಕ್ಷಣವೇ ಅಲರ್ಟ್ ಆದ ಸಿಎಂ ಡಿ.ಕೆ. ಶಿವಕುಮಾರ್, ಮಧ್ಯರಾತ್ರಿ ತಾವೇ ಖುದ್ದಾಗಿ ಜಯನಗರದ ಹೋಟೆಲ್‌ಗೆ ಧಾವಿಸಿದರು. ಅಲ್ಲಿ ರಾಮಲಿಂಗಾರೆಡ್ಡಿಯೊಂದಿಗೆ ಒಂಟಿಯಾಗಿ ಸುಮಾರು ಎರಡೂವರೆ ಗಂಟೆಗಳ ಕಾಲ ರಹಸ್ಯ ಮಾತುಕತೆ ನಡೆಸಿದರು.
ಖಾತೆ ಬದಲಾವಣೆಯ ಭರವಸೆ
ರಾಮಲಿಂಗಾರೆಡ್ಡಿ ಹಿರಿಯತನ ಹಾಗೂ ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು ನೆನಪಿಸಿದ ಡಿಕೆಶಿ, ಹೈಕಮಾಂಡ್ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ತಮಗೆ ಭರವಸೆ ನೀಡಿದ್ದ ‘ಬೆಂಗಳೂರು ನಗರಾಭಿವೃದ್ಧಿ’ ಖಾತೆಯನ್ನೇ ನೀಡಬೇಕು, ಇಲ್ಲದಿದ್ದರೆ ತಮಗೆ ಯಾವುದೇ ಸಚಿವ ಸ್ಥಾನ ಬೇಡ ಎಂದು ರೆಡ್ಡಿ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ.ಡಿಕೆಶಿ ಸುದೀರ್ಘ ಮನವೊಲಿಕೆಯ ನಂತರವೂ ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆಯುವ ಬಗ್ಗೆ ತಕ್ಷಣಕ್ಕೆ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.
ಮುಖಂಡರ ಪ್ರತಿಕ್ರಿಯೆ
ರಾಮಲಿಂಗಾರೆಡ್ಡಿ ನಮ್ಮ ಅತ್ಯಂತ ಆಪ್ತರು ಹಾಗೂ ಪಕ್ಷದ ಹಿರಿಯ ನಾಯಕರು. ಅವರ ಅಸಮಾಧಾನವನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಸಭೆಯ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮತ್ತೊಂದೆಡೆ, ರಾಮಲಿಂಗಾರೆಡ್ಡಿ ಸದ್ಯಕ್ಕೆ ಶಾಸಕರಾಗಿಯೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸಿ ಈ ಬಿಕ್ಕಟ್ಟನ್ನು ಹೇಗೆ ಬಗೆಹರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.



