September 23, 2026
Wednesday, September 23, 2026
spot_img

BREAKING| ಬೆಂಗಳೂರು ಅಭಿವೃದ್ಧಿ ಖಾತೆ ಕೊಟ್ಟಿಲ್ಲ: ಅಸಮಾಧಾನದಿಂದ ರಾಜೀನಾಮೆ ಕೊಟ್ಟ ರಾಮಲಿಂಗಾರೆಡ್ಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಖಾತೆ ವಿಚಾರಕ್ಕೆ ಸಮಸ್ಯೆ ಎದುರಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಬದಲು ಜಲಸಂಪನ್ಮೂಲ ಸಚಿವರನ್ನಾಗಿ ಮಾಡಿದ್ದಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ಸಚಿವ ಸ್ಥಾನಕ್ಕಷ್ಟೇ ರಾಜೀನಾಮೆ ನೀಡುತ್ತಿದ್ದೇನೆ. ಕಾಂಗ್ರೆಸ್‌ನಿಂದ ಹೊರಗೆ ಹೋಗುತ್ತಿಲ್ಲ. ಅಸಮಾಧಾನಗೊಂಡಿದ್ದೇನೆ. ನಿನ್ನೆಯೇ ಹೇಳಿದ್ದೆ, ಬೆಂಗಳೂರು ಅಭಿವೃದ್ಧಿ ಖಾತೆ ಕೊಡಲಿಲ್ಲ ಎಂದರೆ ಸಚಿವ ಸ್ಥಾನ ನನಗೆ ಬೇಡ ಎಂದಿದ್ದಾರೆ.

ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡೋಕೆ ಆಗೋದಿಲ್ಲ. ಜಲಸಂಪನ್ಮೂಲ ಖಾತೆಯಲ್ಲಿ ಕೆಲಸ ಮಾಡೋದಿಲ್ಲ. ಈಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಪತ್ರ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗಿದೆ. ಪಕ್ಷದ ನಿಷ್ಠಾವಂತ ಶಾಸಕ ಹಾಗೂ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ನಾನು ಬೆಂಗಳೂರಿನಲ್ಲೇ ಇರುವವನು, ಜಲಸಂಪನ್ಮೂಲ ಖಾತೆ ಕೊಟ್ಟರೆ ಓಡಾಟ, ನಿಭಾಯಿಸುವುದು ಕಷ್ಟವಾಗುತ್ತದೆ. ವರ್ಷದ ಹಿಂದೆಯೇ ಡಿಕೆಶಿ ನನಗೆ ಮಾತು ಕೊಟ್ಟಿದ್ದರು ಎಂದಿದ್ದಾರೆ.

ನಿನ್ನೆ ರಾತ್ರಿ 13 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಸಚಿವ ರಾಮಲಿಂಗಾರೆಡ್ಡಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿತ್ತು. ಆದರೆ ಮೊದಲಿನಿಂದಲೂ ತಮಗೆ ಬೆಂಗಳೂರು ಅಭಿವೃದ್ಧಿ ಖಾತೆ ಬೇಕು ಎಂದು ರಾಮಲಿಂಗಾರೆಡ್ಡಿ ಪಟ್ಟು ಹಿಡಿದಿದ್ದರು. ಆದರೆ ಅವರಿಗೆ ಆ ಖಾತೆ ಸಿಗಲಿಲ್ಲ. ನಾನು ಯಾವುದೇ ಕಾರಣಕ್ಕೂ ಜಲಸಂಪನ್ಮೂಲ ಖಾತೆಯನ್ನು ಒಪ್ಪಿಕೊಳ್ಳೋದಿಲ್ಲ ಬೇಕಾದ್ರೆ ರಾಜೀನಾಮೆ ಕೊಡ್ತೀನಿ ಎಂದು ಹೇಳಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !