October 18, 2026
Sunday, October 18, 2026
spot_img

ಹಾಲಿವುಡ್‌ ಅಂಗಳದಲ್ಲಿ ‘ರಾಮಾಯಣ’ ದರ್ಬಾರ್: ಬಿಡುಗಡೆಗೂ ಮುನ್ನವೇ ಅಮೆರಿಕದಲ್ಲಿ ಕೋಟಿ ಕೋಟಿ ಕಲೆಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಮತ್ತು ಬಹುನಿರೀಕ್ಷಿತ ಚಿತ್ರವೆನಿಸಿಕೊಂಡಿರುವ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ದಂಗಲ್ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಆಧರಿತ ಸಿನಿಮಾ, ವಿಶ್ವದಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದ್ದು, ಹಾಲಿವುಡ್‌ ಶೈಲಿಯಲ್ಲೇ ಭರ್ಜರಿಯಾಗಿ ಪ್ರಚಾರ ಪಡೆಯುತ್ತಿದೆ.

ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ವಿದೇಶಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಭರಪೂರವಾಗಿ ಸಾಗಿದೆ. ಅಮೆರಿಕದಲ್ಲಿ ಆರಂಭಿಕ ಪ್ರೀಮಿಯರ್ ಬುಕಿಂಗ್‌ನಲ್ಲೇ ಬರೋಬ್ಬರಿ 3 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಸಿನಿಮಾ ಅದ್ಧೂರಿ ಚಾಲನೆ ಪಡೆದುಕೊಂಡಿದೆ. ಸರಾಸರಿ 20 ಡಾಲರ್ ಟಿಕೆಟ್ ದರ ನಿಗದಿಪಡಿಸಲಾಗಿದ್ದು, ನವೆಂಬರ್ 5ರ ಒಳಗೆ ಈ ಗಳಿಕೆಯ ಸಂಖ್ಯೆ ಮತ್ತಷ್ಟು ಎತ್ತರಕ್ಕೆ ಏರುವುದು ಖಚಿತವಾಗಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಸಿನಿಮಾವನ್ನು ಕೇವಲ ಭಾರತೀಯರಿಗಷ್ಟೇ ಅಲ್ಲದೆ ವಿದೇಶಿಗರಿಗೂ ತಲುಪಿಸುವ ಬೃಹತ್ ಯೋಜನೆ ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕದ ಪ್ರತಿಷ್ಠಿತ ಕಾಮಿಕಾನ್‌ಗಳಲ್ಲಿ ಭಾಗವಹಿಸಿ ಸಿನಿಮಾದ ಗುಣಮಟ್ಟವನ್ನು ಪ್ರದರ್ಶಿಸಲಾಗಿದೆ. ವಿದೇಶಿ ವಿತರಣೆಯ ಹಕ್ಕನ್ನು ಪ್ರಸಿದ್ಧ ಸೋನಿ ಪಿಕ್ಚರ್ಸ್ ವಹಿಸಿಕೊಂಡಿರುವುದು ಚಿತ್ರಕ್ಕೆ ಆನೆಬಲ ತಂದಿದೆ.

ಈ ಸಿನಿಮಾದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಕನ್ನಡಿಗರ ಹೆಮ್ಮೆಯ ನಟ ಯಶ್ ಬಣ್ಣ ಹಚ್ಚಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಜೊತೆಗೆ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಮುಂತಾದ ತಾರಾಗಣವಿದೆ. ಈ ಚಿತ್ರಕ್ಕೆ ಜಾಗತಿಕ ಸಂಗೀತ ದಿಗ್ಗಜರಾದ ಎ.ಆರ್. ರೆಹಮಾನ್ ಹಾಗೂ ಹಾನ್ಸ್ ಜೀಮರ್ ಒಟ್ಟಾಗಿ ಸಂಗೀತ ಸಂಯೋಜಿಸಿರುವುದು ಸಿನಿಮಾದ ಮತ್ತೊಂದು ಪ್ರಮುಖ ಆಕರ್ಷಣೆ.

Must Read