ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ನಿನ್ನೆ ಬಂಧಿಸಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆತಂದಿದ್ದು, ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಮುಸಾವೀರ್ ಶಾಜೀಬ್ ಹುಸೇನ್ ಹಾಗೂ ಬಾಂಬ್ ಇಡುವ ಯೋಜನೆ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್ ಮತೀನ್ ತಾಹಾನನ್ನು ರಾಷ್ಟ್ರೀಯ ತನಿಖಾ ದಳ ಕೋಲ್ಕತ್ತಾದಲ್ಲಿ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮತೀನ್, ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ. ಉಗ್ರ ಶಾರಿಕ್‌ಗೆ ಕುಕ್ಕರ್ ಕೊಟ್ಟು ಮಂಗಳೂರಿನಲ್ಲೂ ಸ್ಫೋಟ ಮಾಡಿಸಿದ್ದ. ಅದೇ ರೀತಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡಲು ಮತೀನ್ ಮಸಲತ್ತು ಮಾಡಿದ್ದ ಎನ್ನುವುದು ಎನ್ಐಎ ತನಿಖೆಯಿಂದ ಹೊರಬಿದ್ದಿದೆ.
ಇದರ ಜೊತೆಗೆ ಉಗ್ರರು ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಕೆ ಮಾಡಿರುವ ವಿಷಯ ತಿಳಿದುಬಂದಿದೆ
ಇಬ್ಬರೂ ಆರೋಪಿಗಳನ್ನು ಇಂದು ಬೆಂಗಳೂರಿನ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ನ್ಯಾಯಾಧೀಶರು ಹೆಚ್ಚಿನ ವಿಚಾರಣೆಗೆ ಇನ್ನಷ್ಟು ದಿನ ವಶಕ್ಕೆ ನೀಡುವಂತೆ ಎನ್ ಐಎ ಮುಂದೆ ಕೇಳುವ ಸಾಧ್ಯತೆಯಿದೆ.
ಲಬುರಗಿಯ ವರ್ದಾನಗರ ನಿವಾಸಿಯಾಗಿರುವ ಅನಮೂಲ ಕುಲಕರ್ಣಿ ಎಂಬ ಯುವಕನ ನಕಲಿ ಆಧಾರ ಕಾರ್ಡ್ ಉಗ್ರರ ಬಳಿ ಇತ್ತು. ಟೆಕ್ಕಿ ಅನಮೂಲ ಕುಲಕರ್ಣಿ ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಗ್ರರಿಗೆ ಅನಮೂಲ ಕುಲಕರ್ಣಿ ಅವರ ಆಧಾರ ಕಾರ್ಡ್ ಸಿಕ್ಕಿದ್ದಾದರು ಹೇಗೆ? ಅನಮೂಲ ಕುಲಕರ್ಣಿ ಅವರ ಆಧಾರ ಕಾರ್ಡ್ ಅನ್ನು ಉಗ್ರರರು ಹೇಗೆ ಪಡೆದರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.