ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಯಾಗಿರುವ ರಾಮಲಲಾ ಮೂರ್ತಿಯ ಫೋಟೊ ವೈರಲ್ ಆಗಿದೆ.
ಆದರೆ ಇದು ಜನವರಿ 22 ರಂದು ಪ್ರಾಣಪ್ರತಿಷ್ಠಾಪನೆ ಆಗುವ ರಾಮಲಲಾ ಮೂರ್ತಿ ಅಲ್ಲ ಎಂದು ಅಯೋಧ್ಯೆಯ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ಗರ್ಭಗುಡಿಯಲ್ಲಿ ಸ್ಥಾಪನೆಯಾಗಿರುವ ರಾಮಲಲಾ ಮೂರ್ತಿಯ ಕಣ್ಣುಗಳಿಗೆ ಬಟ್ಟೆ ಮುಚ್ಚಲಾಗಿದೆ. ಇದನ್ನು ತೆರೆಯುವುದಿಲ್ಲ. ಶ್ರೀರಾಮನ ಕಣ್ಣಿನ ಪಟ್ಟಿ ತೆಗೆದಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಇದು ಅಯೋಧ್ಯೆಯ ರಾಮಲಲಾ ವಿಗ್ರಹದ ಫೋಟೊ ಅಲ್ಲ. ಫೋಟೊ ಬಹಿರಂಗವಾಗಿದ್ದೇ ಆದರೆ ಪ್ರಾಣಪ್ರತಿಷ್ಠೆಗೂ ಮುನ್ನ ಬಹಿರಂಗ ಆಗಿದ್ದು ಹೇಗೆ ಎನ್ನುವ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ.
ಬಾಲರಾಮನ ಮೂರ್ತಿಗೆ ಬಟ್ಟೆಯಿಂದ ಮುಚ್ಚಲಾಗಿದೆ. ವಿಗ್ರಹದ ಫೋಟೊ ತೆಗೆಯಲು ಯಾರಿಗೂ ಅವಕಾಶ ನೀಡಿಲ್ಲ. ಆದರೂ ಫೋಟೊ ವೈರಲ್ ಆಗಿದ್ದು ಹೇಗೆ? ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರು, ಗಣ್ಯರು ಎಲ್ಲರೂ ಈ ಫೋಟೊ ಹಂಚಿಕೊಂಡಿದ್ದಾರೆ. ಮೂರ್ತಿಯ ಮೊದಲ ಫೋಟೊ ಜನವರಿ 22 ರಂದೇ ಬಹಿರಂಗವಾಗಲಿದೆ ಎಂದಿದ್ದಾರೆ.
ಈಗಾಗಲೇ ಅಯೋಧ್ಯೆಗೆ ಮೂರ್ತಿ ತರುವ ಮುನ್ನ ತೆಗೆದ ಫೋಟೊಗಳು ಇವಾಗಿರಬಹುದು, ಅದನ್ನು ವೈರಲ್ ಮಾಡಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ.