ಹೊಸದಿಗಂತ ವರದಿ ಬಳ್ಳಾರಿ:
ಕ್ಷೇತ್ರ ಹುಡುಕಾಟದಲ್ಲಿದ್ದಾರೆ ಎಂದು ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರಿಗೆ ಡಿಚ್ಚಿ ಕೊಡುತ್ತಿದ್ದ ಸಾರಿಗೆ ಸಚಿವ ಶ್ರೀರಾಮುಲು ಅವರು ಮುಂಬರುವ ಚುನಾವಣೆಯಲ್ಲಿ ತಮ್ಮ ಕ್ಷೇತ್ರದ ಸುಳಿವು ನೀಡಿದ್ದಾರೆ.
ತವರು ಕ್ಷೇತ್ರ ಬಿಟ್ಟು ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು, ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣ ಅಥವಾ ಸಂಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ. ಗಣರಾಜ್ಯೋತ್ಸವ ಹಿನ್ನೆಲೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಮೊಣಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡೋಲ್ಲ, ಈ ಬಾರಿ ಜಿಲ್ಲೆಯ ಬಳ್ಳಾರಿ ಗ್ರಾಮೀಣ ಕ್ಷೇತ್ರ ಅಥವಾ ಸಂಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವೆ ಎಂದರು.
ಈ ಕುರಿತು ಪಕ್ಷದ ವರಿಷ್ಠರಿಗೆ ಪೂರಕ ಮಾಹಿತಿ ನೀಡಿರುವೆ, ಅವರು ಯಾವ ಕ್ಷೇತ್ರ ಆಯ್ಕೆ ಮಾಡ್ತಾರೋ ಅಲ್ಲಿಯೇ ಸ್ಪರ್ಧೆ ಮಾಡುವೆ, ನಮ್ಮ ಡಬಲ್ ಎಂಜಿನ್ ಸರ್ಕಾರದ ಜನಪರ ಕಾರ್ಯಕ್ರಮಗಳು ನಾಡಿನ ಎಲ್ಲ ಜನರ ಮನೆ ಮಾತಾಗಿವೆ. ರಾಜ್ಯವಷ್ಟೇ ಅಲ್ಲ ಇಡೀ ದೇಶದಲ್ಲೇ ಬಿಜೆಪಿಗೆ ಉತ್ತಮ ವಾತಾವರಣವಿದೆ.
ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ ಗೆದ್ದು ಬೀಗಿದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಕಾಂಗ್ರೆಸ್ ಗೆ ಸೋಲಿನ ಬಿಸಿ ಮುಟ್ಟಿಸಲು ಸಜ್ಜಾಗಿದ್ದೇವೆ. ಎಸ್ಟಿ ಮೀಸಲು ಕ್ಷೇತ್ರಗಳಾದ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸಂಡೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರಿದ್ದಾರೆ. ಇವೆರಡೂ ಕ್ಷೇತ್ರಗಳನ್ನು ವಶಕ್ಕೆ ಪಡೆಯಬೇಕು, ಇದರ ಜೊತೆಗೆ ಜಿಲ್ಲೆ ಸೇರಿದಂತೆ ಎಲ್ಲ ಕಡೆಗಳಲ್ಲೂ ಕಮಲ ಅರಳಿಸಬೇಕು. ಮತ್ತೋಮ್ಮೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದು ನಮ್ಮ ತೀರ್ಮಾನವಾಗಿದೆ.