ಹೊರಬಿತ್ತು ಕುತೂಹಲ ಮೂಡಿಸಿದ್ದ ‘ಸಿಹಿ’ ಸುದ್ದಿ: ಸ್ಯಾಂಡಲ್‌ವುಡ್ ಅಂಗಳಕ್ಕೆ ಕ್ವೀನ್ ಮತ್ತೆ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾತಿಗೆ ತಪ್ಪದೆ ಸಿಹಿ ಸುದ್ದಿ ನೀಡುವ ಮೂಲಕ ಚಿತ್ರನಟಿ ರಮ್ಯಾ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ರಮ್ಯಾ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುಂಬರುವ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ವಂದನೆ ಸಲ್ಲಿಸಿದ್ದಾರೆ.

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಸಿಹಿ ಸುದ್ದಿಯ ಕುರಿತು ನಿಮ್ಮೆಲ್ಲರ ಊಹೆ ಸರಿಯಾಗಿದೆ. ಹೌದು, ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದೇನೆ. ಆದರೆ ಈ ಬಾರಿ ನನ್ನ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟೂಡಿಯೋಸ್ ಮೂಲಕ ನಿರ್ಮಾಪಕಿಯಾಗಲಿದ್ದೇನೆ ಎನ್ನುವುದು ವಿಶೇಷ ಎಂದು ನಟಿ ರಮ್ಯಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಆಪಲ್ ಬಾಕ್ಸ್ ಸಂಸ್ಥೆ ಎರಡು ಚಿತ್ರಗಳನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಹೇಳಲು ನನಗೆ ಸಂತಸವಿದೆ. ಈ ಎರಡೂ ಚಿತ್ರಗಳು ಕೆಆರ್‌ಜಿ ಸಂಸ್ಥೆಯ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿವೆ. ಅದರ ಜೊತೆಯಲ್ಲೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ಸಿನಿಮಾ ಹಾಗೂ ವೆಬ್‌ಸೀರೀಸ್ ನಿರ್ಮಾಣ ಮಾಡಲು ಆಪಲ್ ಬಾಕ್ಸ್ ಸ್ಟೂಡಿಯೋಸ್ ಸಿದ್ಧವಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಹೊಸ ವಿವರಗಳನ್ನು ಆಪಲ್ ಬಾಕ್ಸ್‌ನ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿಸಿ ಎಂದು ಅವರು ಬರೆದುಕೊಂಡಿದ್ದಾರೆ.

ನನ್ನೆಲ್ಲಾ ಪ್ರಯತ್ನಗಳಲ್ಲೂ ನಿರಂತರವಾಗಿ ಜೊತೆಗಿರುವ ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳು, ಸಿನಿಮಾ ವರ್ಗದವರು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ೞನನ್ನ ಪ್ರೀತಿಯ ಅಭಿಮಾನಿಗಳಿಗೆೞ ಹೃತ್ಪೂರ್ವಕ ವಂದನೆಗಳು. ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೆಲೆ ಕಟ್ಟಲಾಗದ್ದು. ವಿಜಯ ಕಿರಗಂದೂರ್, ಜಯಣ್ಣ, ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಗೌಡ ಇವರಿಗೂ ವಿಶೇಷ ಧನ್ಯವಾದಗಳು. ಹೊಸ ಆರಂಭದತ್ತ ಹೆಜ್ಜೆ ಇಡುತ್ತಾ ಕೃತಜ್ಞತೆಗಳೊಂದಿಗೆ ರಮ್ಯಾ… ಎಂದು ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!