ಹೊಸದಿಗಂತ ಡಿಜಿಟಲ್ ಡೆಸ್ಕ್
ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳ ತಂಡವನ್ನು 174 ರನ್ ಗಳಿಂದ ಸೋಲಿಸುವ ಮೂಲಕ ಮಧ್ಯಪ್ರದೇಶ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಸುದೀರ್ಘ 23 ವರ್ಷಗಳ ಬಳಿಕ ಮಧ್ಯಪ್ರದೇಶ ಫೈನಲ್ ಪ್ರವೇಶಿದ ಸಾಧನೆ ಬರೆದಿದೆ. 1998-99 ನೇ ಈ ತಂಡ ಕೊನೆಯ ಬಾರಿ ಫೈನಲ್ ಆಡಿತ್ತು.
ಮೊದಲು ಬ್ಯಾಟ್ ಮಾಡಿದ್ದ ಮಧ್ಯಪ್ರದೇಶ 341 ರನ್ ಕಲೆಹಾಕಿತ್ತು. ತಂಡದ ಪರ ಮಿಂಚಿದ್ದ ಆಕಾಶ್ ರಘುವಂಶಿ 63 ರನ್ ಕಲೆಹಾಕಿಸದ್ದರು. ಈ ಮೊತ್ತವನ್ನು ಬೆನ್ನಟ್ಟಿದ್ದ ಬಂಗಾಳ 273 ರನ್ ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು. ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಮಧ್ಯಪ್ರದೇಶಕ್ಕೆ ರಜತ್ ಪಟೀದಾರ್ 79, ಆದಿತ್ಯಾ ಶ್ರೀವಾತ್ಸವ 82 ರನ್ ಗಳಿಸಿ ಆಧಾರವಾಗುವುದರೊಂದಿಗೆ ರತಂಡವು 281 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಮಧ್ಯಪ್ರದೇಶ ನೀಡಿದ್ದ 350 ರನ್ ಗಳ ಗುರಿ ಬೆನ್ನಟ್ಟಿದ್ದ ಬಂಗಾಳ ಕೇವಲ 175 ರನ್ ಗಳಿಗೆ ಕುಸಿಯುದರೊಂದಿಗೆ ಫೈನಲ್ ಕನಸು ಭಗ್ನವಾಯಿತು. ಮಧ್ಯಪ್ರದೇಶ ಪರ ಮಿಂಚಿನ ದಾಳಿ ನಡೆಸಿದ ಸ್ಪಿನ್ನರ್ ಕುಮಾರ್ ಕಾರ್ತಿಕೇಯ ದ್ವಿತೀಯ ಇನ್ನಿಂಗ್ಸ್ ನಲ್ಲಿ 67 ರನ್ ಗಳಿಗೆ 6 ವಿಕೆಟ್ ಕಬಳಿಸಿ ಬಂಗಾಳದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಟೂರ್ನಿಯುದ್ದಕ್ಕೂ ಮಿಂಚಿದ ಆರ್ಸಿಬಿ ಆಟಗಾರ:
ಮಧ್ಯಪ್ರದೇಶ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿರುವುದರ ಹಿಂದೆ ಆರ್ಸಿಬಿ ಆಟಗಾರನೊಬ್ಬನ ಪರಿಶ್ರಮವಿದೆ. ಪಂದ್ಯಾವಳಿಯಲ್ಲಿ ಕೇವಲ 5 ಪಂದ್ಯಗಳನ್ನಾಡಿ 506 ರನ್ ಸಿಡಿಸಿರುವ ರಜತ್ ಪಟೀದಾರ್ ತಂಡವನ್ನು ಫೈನಲ್ ವರೆಗೆ ಕರೆದೊಯ್ದಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಅಮೂಲ್ಯ ರನ್ ಕಾಣಿಕೆ ನೀಡಿದ ಪಟೀದಾರ್ ತಂಡದ ಆಧಾರ ಸ್ತಂಭವಾಗಿ ಗುರುತಿಸಿಕೊಂಡಿದ್ದಾರೆ.
ಜೂನ್ 22 ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ ಸೆಣಸಲಿದೆ.