ಅಗ್ನಿಪಥ್ ಯೋಜನೆಗೆ ವಿಪಕ್ಷಗಳಿಂದ ವಿಘ್ನ- ಬಿಜೆಪಿ ಅಸಮಾಧಾನ

ಹೊಸದಿಗಂತ ವರದಿ, ಮಂಡ್ಯ :
ಯುವಕರಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಅಗ್ನಿಪಥ್ ಯೋಜನೆಗೆ ದೇಶದ ಮೂರೂ ಪಡೆಗಳ ದಂಡನಾಯಕರು ಒಪ್ಪಿಕೊಂಡು ಶ್ಲಾಘಿಸಿದ್ದಾರೆ. ಬಹುತೇಕ ಚಿಂತಕರು, ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಶ್ಲಾಘನೆಯನ್ನು ಸಹಿಸದ ಕೆಲ ಕಿಡಿಗೇಡಿಗಳು ಯುವ ಮನಸ್ಸುಗಳಿಗೆ ಅಗ್ನಿ ತಾಕಿಸಿ ದೇಶಾದ್ಯಂತ ಬೆಂಕಿ ಅನಾಹುತಗಳನ್ನು ಸೃಷ್ಟಿಸಲು ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ತೀವ್ರವಾಗಿ ಖಂಡಿಸಿದ್ದಾರೆ.
ಭಾರತದ ರಕ್ಷಣಾ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದೇಶದ ಯುವಜನರನ್ನು ಮುಖ್ಯಗುರಿಯಾಗಿಸಿಕೊಂಡು ಅವರಿಗೆ ಸೇನಾ ತರಬೇತಿ ನೀಡಿ ವಿಶ್ವದ ಅತಿ ಬಲಿಷ್ಠ ಸೇನಾ ಬಲವನ್ನು ಹೊಂದಿರುವ ಇಸೇಲ್ ಮಾದರಿಯಲ್ಲಿ ಸೇನೆಯನ್ನು ಸಜ್ಜುಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದರೆ, ಅದರ ಕೀರ್ತಿ ಬಿಜೆಪಿಗೆ ಬರುತ್ತದೆಂಬ ಕುತಂತ್ರದಿಂದ ವಿರೋಧಿ ರಾಜಕಾರಣಿಗಳು ಯುವಜನರನ್ನು ಎತ್ತಿಕಟ್ಟಿ ಪ್ರತಿಭಟನೆಯ ಹಾದಿ ರೂಪಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ಯುವಜನರ ಮನಸ್ಸಿನಲ್ಲಿ ಸದೃಢ ರಾಷ್ಟ್ರ ನಿರ್ಮಾಣದ ಕಲ್ಪನೆಯನ್ನು ಬಿತ್ತಬೇಕೆಂಬ ಮಹದಾಸೆಯಿಂದ ನರೇಂದ್ರಮೋದಿ ನೇತೃತ್ವದ ಸರ್ಕಾರ ಅಗ್ನಿಪಥ ಯೋಜನೆ ರೂಪಿಸಿದೆ. ಆದರೆ ಇದನ್ನು ತಡೆಯುವ ಉದ್ದೇಶದಿಂದ ಇನ್ನಿಲ್ಲದ ವಿರೋಧ ವ್ಯಕ್ತಪಡಿಸುತ್ತಾ, ದೇಶದಾದ್ಯಂತ ಗಲಭೆ ಸೃಷ್ಠಿಸುವ ಹುನ್ನಾರ ನಡೆಸಿದ್ದಾರೆ ಎಂದು ವಿರೋಧಿಗಳ ವಿರುದ್ಧ ಕಿಡಿಕಾರಿದರು.
ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನರಿಗೆ ನಾಲ್ಕು ವರ್ಷಗಳ ಕಾಲ ಸೇನಾ ತರಬೇತಿ ನೀಡಿ ರಾಷ್ಟ್ರದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಸೇವೆ ಪಡೆಯಲು ನಿರ್ಧರಿಸಲಾಗಿದೆ. ಇದೇ ರೀತಿಯ ಮಾದರಿಯನ್ನು ಸುಭಾಷ್‌ಚಂದ್ರಬೋಸ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೂಪಿಸಿದ್ದರು. ಅಂತಹುದ್ದೇ ಮಾದರಿಯನ್ನು ದೇಶದ ಭದ್ರತೆಗಾಗಿ ರೂಪಿಸಲು ಹೊರಟರೆ, ಪಾಕಿಸ್ತಾನ ಮತ್ತು ಚೈನಾ ಬೆಂಬಲಿತ ವಿರೋಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಜನರಿಗೆ ಸ್ವಾವಲಂಬಿ ಬದುಕನ್ನು ನೀಡುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಇಂತಹ ಯೋಜನೆಯನ್ನು ಬೆಂಬಲಿಸುವುದು ಅಗತ್ಯ. ಈಗಾಗಲೇ ಸೇನಾ ನೇಮಕಾತಿ ಪ್ರಾರಂಭವಾಗಿದ್ದು, ಸೇನಾ ನೇಮಕಾತಿಗೆ ಹೆಚ್ಚಿನ ಯುವಜನರು ಒಲವು ತೋರುತ್ತಿದ್ದಾರೆ ಎಂದು ಮೂರೂ ಪಡೆಗಳ ದಂಡನಾಯಕರೇ ಹೇಳಿದ್ದಾರೆ. ಆದರೂ ಕೆಲವರು ಯುವಜನರನ್ನು ಛೂಬಿಟ್ಟು ಇಲ್ಲದ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದಾದರೂ ಯುವಜನರು ದೇಶದ ಐಕ್ಯತೆ, ಭದ್ರತೆ ದೃಷ್ಟಿಯಿಂದ ಸೇನಾ ತರಬೇತಿ ಪಡೆಯುವುದು ಅತ್ಯಗತ್ಯ. ಒಂದು ವೇಳೆ ವಿರೋಧಿ ರಾಷ್ಟ್ರಗಳು ನಮ್ಮ ಮೇಲೆ ಏಕಾಏಕಿ ಮುಗಿ ಬಿದ್ದರೆ ರಾಷ್ಟ್ರದ ಜನರನ್ನು ರಕ್ಷಿಸುವ ಹೊಣೆ ಯುವಜನರ ಮೇಲಿರುತ್ತದೆ. ಇದನ್ನು ಅರಿತು ಜವಾಬ್ದಾರಿಯಿಂದ ನಡೆಯಬೇಕು. ಇಲ್ಲದಿದ್ದರೆ ಅಗ್ನಪಥವನ್ನು ವಿರೋಧಿಸಿ ಹುನ್ನಾರ ನಡೆಸುವವರೇ ವಿಚಿದ್ರಕಾರಕ ಶಕ್ತಿಗಳಿಗೆ ಮೊದಲು ಬಲಿಯಾಗುತ್ತಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!