ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಣ್ಣುಮಕ್ಕಳನ್ನು ಹೊರಗೆ ಬಿಡುವುದಕ್ಕೂ ಭಯವಾಗುವಂಥ ವಾತಾವರಣ ನಿರ್ಮಾಣವಾಗುತ್ತಿದ್ದು, 8 ವರ್ಷದ ವಿದ್ಯಾರ್ಥಿನಿಯ ಮೇಲೆ 14 ವರ್ಷದ ಮೂವರು ಹಿರಿಯರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಹತ್ಯೆಗೈದಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಮುಚ್ಚುಮರ್ರಿ ಎಂಬಲ್ಲಿ ನಡೆದಿದೆ.
ಅಪ್ರಾಪ್ತ ಆರೋಪಿಗಳನ್ನು ಪೊಲೀಸರುಬಂಧಿಸಿದ್ದು, ವಿಚಾರಣೆ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಹತ್ಯೆಯ ಬಳಿಕ ಬಾಲಕಿಯ ಶವವನ್ನು ಕಾಲುವೆಗೆ ಎಸೆದಿದ್ದಾರೆ. ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಭಾನುವಾರ ಮುಚ್ಚುಮರ್ರಿ ಪಾರ್ಕ್‍ನಲ್ಲಿ ಆಟವಾಡುತ್ತಿದ್ದಳು. ಬಳಿಕ ಅಲ್ಲಿಂದ ಆಕೆ ನಾಪತ್ತೆಯಾಗಿದ್ದು, ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಶ್ವಾನದಳವನ್ನು ಬಳಕೆ ಮಾಡಿಕೊಂಡು ಹುಡುಕಾಟ ನಡೆಸಿದಾಗ, ಮೂವರು ಅಪ್ರಾಪ್ತರ ಬಳಿ ಶ್ವಾನ ಕರೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸಲೇಬೇಕು ಎಂದು ಪೋಷಕರು, ಸ್ಥಳೀಯರು ಪಟ್ಟು ಹಿಡಿದಿದ್ದಾರೆ.