ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಪ್ರಕರಣದಲ್ಲಿ ನಟ, ಶಾಸಕ ಕೆ. ಮುಕೇಶ್ ಅವರನ್ನು ಸೆ.3ರವರಗೆ ಬಂಧಿಸದಂತೆ ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದೆ.
ನಟಿಯೊಬ್ಬರು ನೀಡಿದ ಲೈಂಗಿಕ ದೌರ್ಜನ್ಯದ ದೂರಿನ ಅನ್ವಯ ಆಗಸ್ಟ್ 28ರಂದು ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೆ.ಮುಕೇಶ್ ಕೊಚ್ಚಿಯ ಪ್ರಿನ್ಸಿಪಾಲ್ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು.
ಆರೋಪಿಯು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಸೆ.3ರವರೆಗೆ ಅವರನ್ನು ಬಂಧಿಸಬಾರದು ಎಂದು ತನಿಖಾ ಅಧಿಕಾರಿಗೆ ಕೋರ್ಟ್ ನಿರ್ದೇಶಿಸಿತು.
2010ರಲ್ಲಿ ಮುಕೇಶ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಟಿಯೊಬ್ಬರು ಆರೋಪಿಸಿದ್ದಾರೆ.
ಈ ಸಂಬಂಧ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಅಡಿ ಕೊಚ್ಚಿಯ ಮರಾಡು ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ದೂರು ದಾಖಲಾಗಿತ್ತು.
ಸಂತ್ರಸ್ತೆ ನೀಡಿದ ದೂರು ದುರುದ್ದೇಶದಿಂದ ಕೂಡಿದೆ ಎಂದು ಮುಕೇಶ್ ತಮ್ಮ ಜಾಮೀನು ಅರ್ಜಿಯಲ್ಲಿ ಹೇಳಿದ್ದರು. ಅಲ್ಲದೆ ತಮ್ಮ ಸಿನಿಮಾ ಹಾಗೂ ರಾಜಕೀಯ ಜೀವನಕ್ಕೆ ಕಳಂಕ ತರುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದು ಉಲ್ಲೇಖಿಸಿದ್ದರು.