ಹೊಸದಿಗಂತ ವರದಿ, ಮಡಿಕೇರಿ:
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ ನ್ಯಾಯಾಲಯ 11 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 25ಸಾವಿರ ರೂ.ದಂಡ ಮತ್ತು ಸಂತ್ರಸ್ತೆಗೆ 4 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಆದೇಶಿಸಿದೆ.
ಕೆದಕಲ್ ಗ್ರಾಮದ ನೆಗದಾಳ್ ನಿವಾಸಿ ಶಿವಪ್ರಕಾಶ್ ಅಲಿಯಾಸ್ ಶಶಿ ಎಂಬಾತನೇ ಶಿಕ್ಷೆಗೆ ಗುರಿಯಾದವನಾಗಿದ್ದಾನೆ.
ಆರೋಪಿಯು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ 2022ರ ಮಾ.8ರಂದು ಕೊಡಗು ಮಹಿಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಲಂ 354(a), 376(2) (f) IPC & 4 & 8 ಪೋಕ್ಸೋ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಕೊಡಗು ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾದೇವ, ಪಿಎಸ್ಐ ಕೆ.ಬಿ.ಅಚ್ಚಮ್ಮ, ಮಹಿಳಾ ಕಾನ್ಸ್’ಟೇಬಲ್ ಕುಮಾರಿ, ಕಾನ್ಸ್’ಟೇಬಲ್ ಹೆಚ್.ಆರ್.ಶ್ರೀನಿವಾಸ್ ಅವರುಗಳು ತನಿಖೆ ಕೈಗೊಂಡು ಆರೋಪಿ ಶಿವಪ್ರಕಾಶ್ ಶಶಿ ವಿರುದ್ಧ 2022ರ ಮೇ 7ರಂದು ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು ಆರೋಪಿ ಶಿವಪ್ರಕಾಶ್ ಅಲಿಯಾಸ್ ಶಶಿಗೆ ಕಲಂ: 376(2) (ಎಫ್) ಐಪಿಸಿರಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ.ದಂಡ ಮತ್ತು ಕಲಂ: 354(ಎ)(1) ಐಪಿಸಿರಡಿ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 5ಸಾವಿರ ದಂಡವನ್ನು ವಿಧಿಸಿ ಹಾಗೂ ನೊಂದ ಬಾಲಕಿಗೆ 4ಲಕ್ಷ ರೂ. ಗಳ ಪರಿಹಾರವನ್ನು ಒದಗಿಸುವಂತೆ ತೀರ್ಪು ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ಸಾಕ್ಷಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಉತ್ತಮವಾಗಿ ವಾದ ಮಂಡಿಸಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ಸರ್ಕಾರಿ ಅಭಿಯೋಜಕ ರುದ್ರಪ್ರಸನ್ನ ಹಾಗೂ ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಅವರು ಅಭಿನಂದಿಸಿದ್ದಾರೆ.