ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಪತ್ತಂತಿಟ್ಟ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 59 ಮಂದಿ ಆರೋಪಿಗಳ ಪೈಕಿ 57 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಜನವರಿ 10 ರಂದು ಇಳವುಂತಿಟ್ಟ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ಇಲ್ಲಿಯವರೆಗೂ ವಿದೇಶದಲ್ಲಿರುವ ಇಬ್ಬರನ್ನು ಹೊರತುಪಡಿಸಿ ಪಟ್ಟಿಯಲ್ಲಿರುವ ಎಲ್ಲಾ ಆರೋಪಿಗಳನ್ನು ಸಮಗ್ರ ತನಿಖೆಯ ಮೂಲಕ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿ ಜಿ ವಿನೋದ್ ಕುಮಾರ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೊನೆಯ ಆರೋಪಿ 25 ವರ್ಷದ ಯುವಕನನ್ನು ಭಾನುವಾರ ಬೆಳಿಗ್ಗೆ ಅವರ ಮನೆಯ ಸಮೀಪದಲ್ಲಿಯೇ ಬಂಧಿಸಲಾಗಿದೆ. ಮಹಿಳಾ ಐಪಿಎಸ್ ಅಧಿಕಾರಿ ಎಸ್ ಅಜಿತಾ ಬೇಗಂ ನೇತೃತ್ವದ ವಿಶೇಷ ತನಿಖಾ ತಂಡವು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ.
ಆರೋಪಿಗಳ ಹೇಳಿಕೆ ಆಧರಿಸಿ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 30 ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳಲ್ಲಿ ಐವರು ಅಪ್ರಾಪ್ತರು ಕೂಡ ಇದ್ದಾರೆ. ತನಿಖೆ ಪೂರ್ಣಗೊಳಿಸಿ ಆದಷ್ಟು ಬೇಗ ದೋಷಾರೋಪ ಪಟ್ಟಿ ಸಲ್ಲಿಸುವುದು ಪೊಲೀಸ್ ತಂಡದ ಉದ್ದೇಶವಾಗಿದೆ’ ಎಂದು ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.