ಹೊಸದಿಗಂತ ವರದಿ, ಚಿತ್ರದುರ್ಗ:
ಚಾಕೊಲೇಟ್ ಕೊಡುವುದಾಗಿ ಅಪ್ರಾಪ್ತ ಬಾಲಕಿಗೆ ಆಸೆ ತೋರಿಸಿ ಮನೆಗೆ ಕರೆದೊಯ್ದು ಬಲವಂತವಾಗಿ ಅತ್ಯಾಚಾರ ಮಾಡಿದ್ದ ಆರೋಪಿಗೆ ಚಿತ್ರದುರ್ಗ ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೊ) ಐದು ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಹೊಸದುರ್ಗ ತಾಲೂಕಿನ ಅತ್ತಿಮಗ್ಗೆ ಗ್ರಾಮದ ತಿಮ್ಮಯ್ಯ 2022 ನವೆಂಬರ್ 2 ರಂದು ಅಪ್ರಾಪ್ತ ಬಾಲಕಿಗೆ ಚಾಕೊಲೇಟ್ ನೀಡುವುದಾಗಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸಿಪಿಐ ಎಂ.ಡಿ.ಫೈಜುಲ್ಲಾ ತನಿಖೆ ನಡೆಸಿ ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೋಕ್ಸೊ) ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಆರೋಪಿ ತಿಮ್ಮಯ್ಯನಿಗೆ ಐದು ವರ್ಷ ಕಠಿಣ ಸೆರೆವಾಸ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.
ಪ್ರಕರಣದಲ್ಲಿ ನೊಂದ ಬಾಲಕಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕ ಎಚ್.ಅರ್.ಜಗದೀಶ್ ವಾದ ಮಂಡಿಸಿದ್ದರು.