ಹೊಸದಿಗಂತ ವರದಿ,ಕಲಬುರಗಿ
ನಗರದಲ್ಲಿ ಅಪ್ರಾಪ್ತ ಬುದ್ದಿ ಮಾಂಧ್ಯ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃತ್ಯ ನಡೆಸಿದವರು ಸಹ ಅಪ್ರಾಪ್ತರು. ಬಾಲ ಕಾಮುಕರ ಈ ಅಟ್ಟಹಾಸ ಕೆಲಸ ಜನರನ್ನು ತಲ್ಲಣಗೊಳಿಸುವಂತೆ ಮಾಡಿದೆ.
೧೩ ವರ್ಷದ ಬುದ್ದಿಮಾಂಧ್ಯ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಕಳೆದ ೫ ರಂದು ಐವರು ಕಾಮುಕರು ಸೇರಿಕೊಂಡು ಪುಸಲಾಯಿಸಿ ಆಕೆಯನ್ನು ಹಾಗರಗಾ ರಸ್ತೆಯಲ್ಲಿರುವ ಚುಣ್ಣಾಬಟ್ಟಿ ಪ್ರದೇಶದ ಕಡೆಗೆ ಕರೆದುಕೊಂಡು ಹೋಗಿ ಅಲ್ಲಿನ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.
ಬಾಲಕಿಗೆ ಮನೆಗೆ ಬಂದ ಎರಡು ದಿನ ಗುಪ್ತಾಂಗ ಹಾಗೂ ಹೊಟ್ಟೆ ನೋವು ಆಗುತ್ತಿದೆ ಎಂದು ಪೋಷಕರ ಮುಂದೆ ಹೇಳಿಕೊಂಡಿದ್ದಾಳೆ. ಆಕೆಯನ್ನು ವಿಚಾರಿಸಿ, ಆಗಿರುವ ಘಟನೆಯನ್ನು ಬಿಡಿಸಿ ಹೇಳಿದ್ದಾಳೆ. ಪೋಷಕರು ಮಾಹಿತಿ ಕಲೆ ಹಾಕಿಕೊಂಡು ಬೆನ್ನಲ್ಲಿಯೇ ವಿಶ್ವವಿದ್ಯಾಲಯ ಠಾಣೆಗೆ ಭಾನುವಾರ ಮಾಹಿತಿ ನೀಡಿದ್ದಾರೆ.
೧೪ರಿಂದ ೧೫ ವರ್ಷದ ಐವರು ಬಾಲಕರು ಸೇರಿಕೊಂಡು ಆಕೆಯನ್ನು ಚುಣ್ಣಾಬಟ್ಟಿ ಕಡೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಒಬ್ಬರಾದ ಮೇಲೆ ಒಬ್ಬರು ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸಿದವರು ಹಾಗೂ ದೌರ್ಜನ್ಯಕ್ಕೊಳಗಾದ ಬಾಲಕಿ ಇಬ್ಬರು ಅಪ್ರಾಪ್ತರು. ಅಲ್ಲದೆ ಒಂದೇ ಬಡಾವಣೆಯವರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯ ನಡೆಸಿದ ಬಾಲಕರನ್ನು ಪೊಲೀಸರು ಸೋಮವಾರ ಸಂಜೆ ವಿಚಾರಣೆ ನಡೆಸಿದ್ದಾರೆ. ಅವರಿಂದ ಮಾಹಿತಿ ಪಡೆಯುವ ಕೆಲಸ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ ಠಾಣೆಯಲ್ಲಿ ಮೈನರ್ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.