ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣ ಪತ್ತೆಯಾಗಿದ್ದು, ತಕ್ಷಣವೇ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಹೊಟ್ಟೆಯಿಂದ ಭ್ರೂಣವನ್ನು ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ 40 ದಿನದ ಮಗುವಿನ ಹೊಟ್ಟೆಯಲ್ಲಿ ಭ್ರೂಣವು ಪತ್ತೆಯಾದಾಗ ಅಂತಹ ಒಂದು ಘಟನೆ ಈ ಹಿಂದೆ ಸಂಭವಿಸಿದೆ. ಇದೊಂದು ಅಪರೂಪದ ಪ್ರಕರಣ ಎಂದು ತಜ್ಞರು ಹೇಳಿದ್ದಾರೆ.
ಈ ಅದ್ಭುತ ಘಟನೆ ನಡೆದಿರುವುದು ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಲ್ಲಿ. ಹೊಟ್ಟೆ ನೋವಿನಿಂದ ಮಗು ಆಗಾಗ್ಗೆ ಅಳುತ್ತಿತ್ತು. ಇದನ್ನು ಗಮನಿಸಿದ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಹೊಟ್ಟೆಯ ಸಿಟಿ ಸ್ಕ್ಯಾನ್ ಮಾಡಿದರು. ವರದಿಯನ್ನು ನೋಡಿದಾಗ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣವು ಬೆಳೆಯುತ್ತಿರುವುದು ಪತ್ತೆಯಾಗಿದೆ. ಇದೆಲ್ಲ ತಿಳಿದ ಮಗುವಿನ ಕುಟುಂಬಸ್ಥರು ಬೆಚ್ಚಿಬಿದ್ದರು. ಮಗುವಿನ ಹೊಟ್ಟೆಯಲ್ಲಿ ಗೆಡ್ಡೆ ಇದೆ ಎಂದು ಮೊದಲಿಗೆ ಎಲ್ಲರೂ ಭಾವಿಸಿದ್ದರು.
ಪರೀಕ್ಷೆಯ ಫಲಿತಾಂಶಗಳನ್ನು ಅಧ್ಯಯನ ಮಾಡಿದ ನಂತರ, ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಪೋಷಕರ ಒಪ್ಪಿಗೆ ಮೇರೆಗೆ ಮಗುವಿನ ಆಪರೇಷನ್ ಮಾಡಲಾಗಿದೆ. ಕೆಲವು ಸಂದರ್ಭಗಳಲ್ಲಿ, ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದೊಳಗೆ ಮತ್ತೊಂದು ಭ್ರೂಣವು ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ವೈದ್ಯರ ಪ್ರಕಾರ, ದೇಶದಲ್ಲಿ ಇದುವರೆಗೆ 200 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.