ಈ ನವೋದ್ದಿಮೆ ಮೂಲಕ ರತನ್ ಟಾಟಾ ಬರೆಯಲಿದ್ದಾರೆ ಭಾರತದಲ್ಲೊಂದು ಭಾಂಧವ್ಯಗಾಥೆ!

 

  • ಚೈತನ್ಯ ಹೆಗಡೆ

ಒಂದು ಸುದ್ದಿಯಾಗಿ ನೀವದನ್ನು ಆಗಲೇ ಓದಿರುತ್ತೀರಿ. ಅದೇನೆಂದರೆ, ದೇಶದ ಚಿರಪರಿಚಿತ ಉದ್ಯಮ ದಿಗ್ಗಜ ರತನ್ ಟಾಟಾ ಅವರು ಮೊನ್ನೆ ಆಗಸ್ಟ್ 16ಕ್ಕೆ ಗುಡ್ ಫೆಲ್ಲೋಸ್ ಎಂಬ ನವೋದ್ದಿಮೆಯೊಂದಕ್ಕೆ ಹೂಡಿಕೆಯ ಚೆಕ್ ಒಂದನ್ನು ಬರೆದುಕೊಟ್ಟರು. ಐದು ವರ್ಷಗಳ ಹಿಂದೆ ಟಾಟಾ ಸಮೂಹದ ಎಲ್ಲ ಕಾರ್ಯನಿರ್ವಾಹಕ ಜವಾಬ್ದಾರಿಗಳಿಂದ ಮುಕ್ತರಾದ ನಂತರ ರತನ್ ಟಾಟಾ ಅವರು ಪೇಟಿಎಂ, ಲೆನ್ಸ್ ಕಾರ್ಟ್, ಓಲಾ ಎಲೆಕ್ಟಿಕ್ಸ್ ಸೇರಿದಂತೆ ಸುಮಾರು 50 ನವೋದ್ದಿಮೆಗಳಲ್ಲಿ ಹಣ ಹೂಡಿದ್ದಾರೆ. ಹೀಗಾಗಿ ನವೋದ್ದಿಮೆಗೆ ಹಣ ಹೂಡಿದರು ಅನ್ನೋದು ಅಂತ ವಿಶೇಷ ಸಂಗತಿ ಆಗಬೇಕಿರಲಿಲ್ಲ. ಆದರೆ ಅವರು ಹಣ ಕೊಟ್ಟಿರುವ ಗುಡ್ ಫೆಲ್ಲೋಸ್ ಎಂಬ ನವೋದ್ದಿಮೆ ಮಾಡಲು ಹೊರಟಿರುವುದು ಏನನ್ನು ಅಂತ ನೋಡಿದಾಗ, ನೀವು ಸಾಮಾಜಿಕ ಸಂವೇದನೆ ಉಳ್ಳವರಾಗಿದ್ದರೆ ಪುಳಕಿತರಾಗದೇ ಇರಲಾರಿರಿ.

ಗುಡ್ ಫೆಲ್ಲೋಸ್ ಮಾಡಲಿರುವುದು ಇಷ್ಟೇ. ಇಳಿವಯಸ್ಸಿನಲ್ಲಿ ಏಕಾಂಗಿತನದಿಂದ ಕಳವಳಗೊಂಡವರ ಬಾಳಿಗೆ ಇವತ್ತಿನ ಇಪ್ಪತ್ತರ ಪ್ರಾಯದ ಯುವಕರ ಸಾಂಗತ್ಯವನ್ನು ಕಲ್ಪಿಸಿಕೊಡುತ್ತದೆ. ಅರೇ, ಇದೇನೋ ಸೇವೆ ಇದ್ದಹಾಗಿದೆಯಲ್ಲ, ಉದ್ದಿಮೆ ಹೇಗಾಯಿತು ಅಂತೆನಿಸಬಹುದೇನೋ. ಉಹುಂ.. ಇಲ್ಲಿನ ಯುವಪಡೆಯನ್ನು ಸಂಬಳಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಕೇವಲ ಸೇವಾಮನೋಭಾವ ಇದೆ ಅಂತ ಯಾರೆಲ್ಲ ಸೇರುವಂತಿಲ್ಲ. ಅವರ ಮನಃಸ್ಥಿತಿಯನ್ನು ಅಭ್ಯಸಿಸಿ, ಅದಕ್ಕೆ ತಕ್ಕ ಪರೀಕ್ಷೆಗಳನ್ನು ಮಾಡಿ ಗುಡ್ ಫೆಲ್ಲೋಸ್ ಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹಿಂದೆ ಇದನ್ನು ಸ್ವಯಂಸೇವಾ ಚಟುವಟಿಕೆಯಂತೆ ನಡೆಸುವುದಕ್ಕೆ ಹೋದ ಹಲವರ ಪ್ರಯತ್ನಗಳು ಫಲ ಕೊಟ್ಟಿಲ್ಲ. ಏಕೆಂದರೆ, ದೀರ್ಘಾವಧಿಯಲ್ಲಿ ಸ್ವಯಂಸೇವಕರು ಹಿರಿಯರೊಂದಿಗೆ ಇರುವುದು ಸಾಧ್ಯವಾಗಲಿಲ್ಲ, ಅಲ್ಲೊಂದು ಸ್ಕೇಲ್ ಅಪ್ ಆಗಲಿಲ್ಲ. ಇತ್ತ, ಈ ಸೇವೆಯನ್ನು ಪಡೆಯುವವರೂ ಆರ್ಥಿಕ ನಿರ್ಗತಿಕರೇನಲ್ಲ ಅಥವಾ ಇದೇನೂ ವೃದ್ಧಾಶ್ರಮ ಮಾದರಿಯೂ ಅಲ್ಲ. ಖಾಲಿಯಿರೋದು ಬ್ಯಾಂಕ್ ಖಾತೆಯಲ್ಲ ಬದಲಿಗೆ ಮನಸ್ಸು ಎನ್ನುವ ಹಂತದಲ್ಲಿರುವ, ಈ ಸೇವೆಗೆ ಚಂದಾದಾರರಾಗಬಲ್ಲ ಇಳಿವಯಸ್ಸಿನವರು ಇದರ ಸ್ವೀಕೃತಿ ಸಾಲಿನಲ್ಲಿರುವಂಥವರು.

ಮೇಕ್ ನೊ ಮಿಸ್ಟೇಕ್… ಗುಡ್ ಫೆಲ್ಲೋಸ್ ಅನ್ನೋದು ವಯಸ್ಸಾದವರು ಮನೆಗೆಲಸಕ್ಕೆ ಸಹಾಯಕರನ್ನು ಇಟ್ಟುಕೊಳ್ಳೋ ಥರದ ವ್ಯವಸ್ಥೆ ಖಂಡಿತ ಅಲ್ಲ. ಇವರು ಭಾರತದ ಯಾವುದೋ ಮೆಟ್ರೊ ಸಿಟಿಗಳಲ್ಲಿದ್ದಾರೆ, ಇವರ ಮಕ್ಕಳು-ಮೊಮ್ಮಕ್ಕಳೆಲ್ಲ ಅಮೆರಿಕ ಸೇರಿಕೊಂಡಿದ್ದಾಗಿದೆ. ಗಂಡನೋ-ಹೆಂಡತಿಯೋ ತೀರಿಕೊಂಡಿದ್ದಾರೆ ಹೀಗಾಗಿ ನಗರದ ಗಿಜಿ ಗಿಜಿ ನಡುವೆ ಇದ್ದೂ ಏಕಾಂಗಿಯಾಗಿದ್ದಾರೆ. ಇವರಿಗೆ ಬೇಕಿರುವ ಸೇವೆ ಏನು ಹಾಗಾದರೆ? ಒಬ್ಬೊಬ್ಬರ ಪಾಲಿಗೆ ಒಂದು ಬಗೆಯ ಅಗತ್ಯ. ಯಾರೋ ಒಬ್ಬರಿಗೆ ಹಾಗೆಯೇ ಸಾಯಂಕಾಲದಲ್ಲಿ ತನ್ನ ಜತೆ ಹರಟುವವರು ಬೇಕು; ಮತ್ಯಾರಿಗೋ ತಿರುಗಾಟಕ್ಕೆ ಕಂಪನಿ ಕೊಡುವುದಕ್ಕೊಂದು ಜೀವ ಬೇಕು; ಇನ್ಯಾರಿಗೋ ಸಿನಿಮಾ ಥಿಯೇಟರಿಗೆ ಹೋಗುವುದಕ್ಕೊಂದು ಸಾಂಗತ್ಯ ಬೇಕು…. ಇವೆಲ್ಲವನ್ನು ಪೂರೈಸಲಿಕ್ಕಿದೆ ಗುಡ್ ಫೆಲ್ಲೋಸ್.

ನಿಜ. ರತನ್ ಟಾಟಾ ಇದರಿಂದ ಹಣಕಾಸಿನ ರಿಟರ್ನ್ಸ್ ನಿರೀಕ್ಷಿಸುತ್ತಿಲ್ಲ. ಹಾಗಂತ ಇದು ಚಾರಿಟಿ ಅಲ್ಲ. ಇದೇ ಚೆಕ್ಕನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ಬರೆದು ಸಹ ತಾನು ಸಮಾಜಕ್ಕೆ ಮಿಡಿದನೆಂಬ ಭಾವದಿಂದ ಹಗುರಾಗಿಬಿಡಬಹುದಿತ್ತು ರತನ್ ಟಾಟಾ. ಅಂಥ ದಾನಗಳನ್ನು ಅವರು ಬೇರೆ ರೀತಿ ಮಾಡಿರುತ್ತಾರೆ ಸಹ. ಆದರೆ ಇದಕ್ಕೆ ಹೀಗೊಂದು ನವೋದ್ದಿಮೆ ರೂಪವಿರದಿದ್ದರೆ ಅಲ್ಲಿ ವೃತ್ತಿಪರತೆಯನ್ನು, ಶಿಸ್ತನ್ನು, ಸಮಾಜ ಎದುರಿಸುತ್ತಿರುವ ಈ ಸೂಕ್ಷ್ಮ ಮಾನಸಿಕ ಸಮಸ್ಯೆಯ ಪರಿಹಾರಕ್ಕೆ ಸಾಂಸ್ಥಿಕ ಸ್ವರೂಪದ ಪರಿಹಾರ ರಚಿಸುವುದು ಬಹುಶಃ ಸಾಧ್ಯವಿರಲಿಲ್ಲವೇನೋ.

84ರ ಮಾಗಿದ ಜೀವ ರತನ್ ಟಾಟಾ ಅತ್ಯಾಪ್ತವೆನಿಸೋದು ಈ ಕಾರಣಕ್ಕಾಗಿಯೇ. ಗುಡ್ ಫೆಲ್ಲೋಸ್ ಶುಭಾರಂಭದ ಕಾರ್ಯಕ್ರಮದಲ್ಲಿ ರತನ್ ಟಾಟಾ ಹೇಳಿದ್ರು- “ನೀವು ಒಬ್ಬಂಟಿಯಾಗಬೇಕಾದ ಸಂದರ್ಭ ಬರುವವರೆಗೆ ಏಕಾಂಗಿತನ ಎಷ್ಟು ಕಷ್ಟ ಎಂಬುದು ಗೊತ್ತಾಗುವುದಿಲ್ಲ. ಯಾರದ್ದಾದರೂ ಸಾಂಗತ್ಯ ಬೇಕೆನಿಸುತ್ತದೆ. ವಯಸ್ಸಾಗುವುದರಲ್ಲಿ ಸಮಸ್ಯೆ ಇಲ್ಲ. ಆದರೆ ಒಮ್ಮೆ ವಯಸ್ಸಾದ ನಂತರ ಜಗತ್ತು ಎಷ್ಟೆಲ್ಲ ಬದಲಾಗಿಬಿಟ್ಟಿದೆ ಎಂಬ ಭಾವ ಕಂಗೆಡಿಸುತ್ತದೆ.” ಗುಡ್ ಫೆಲ್ಲೋಸ್ ಒದಗಿಸುವ ಯುವ ಸಾಂಗತ್ಯ ಈ ಸಾಮಾಜಿಕ ಸಮಸ್ಯೆಯನ್ನು ಸಹನೀಯವಾಗಿಸಲಿದೆ ಎಂಬ ನಂಬಿಕೆ ತಮಗಿದೆ ಅನ್ನೋ ವಿಶ್ವಾಸ ಟಾಟಾ ಮಾತುಗಳಲ್ಲಿ ಮಿನುಗಿತ್ತು.

ಅಂದಹಾಗೆ ಈ ಗುಡ್ ಫೆಲ್ಲೋಸ್ ಸ್ಥಾಪಕ, 30ರ ಹರೆಯದ ಶಂತನು ನಾಯ್ಡು ಟಾಟಾರ ಕಚೇರಿ ವ್ಯವಸ್ಥಾಪಕರಾಗಿದ್ದವರು. ಇಂಥದೊಂದು ಯೋಜನೆಯ ಹೊಳಹು ತಮಗೆ ದೊರೆತಿದ್ದೇ ಟಾಟಾ ಅವರ ಸಾಂಗತ್ಯದಲ್ಲಿ. ತಮ್ಮ ನಡುವೆ ಐದುವರೆ ದಶಕಗಳ ವಯೋಮಾನ ವ್ಯತ್ಯಾಸವಿದ್ದರೂ ಟಾಟಾ ಅವರ ಸಹವಾಸ ಬಹಳ ಉತ್ತೇಜನಕಾರಿಯಾದದ್ದು ಎನ್ನುತ್ತಾರವರು.

ಸದ್ಯಕ್ಕೆ ಮುಂಬೈನಲ್ಲಿ ಲಭ್ಯವಿರುವ ಗುಡ್ ಫೆಲ್ಲೋಸ್ ಸೇವೆ ಮುಂಬರುವ ದಿನಗಳಲ್ಲಿ ಪುಣೆ, ಬೆಂಗಳೂರು, ಚೆನ್ನೈಗಳಿಗೆ ವಿಸ್ತರಿಸಲಿದೆ.

ಇದೀಗ ಗುಡ್ ಫೆಲ್ಲೋಸ್ ಮತ್ತು ಟಾಟಾ ವಿಷಯ ಪಕ್ಕಕ್ಕಿಟ್ಟು ಸಮಾಜದಲ್ಲಿ ರೂಪುಗೊಳ್ಳುತ್ತಿರುವ ಟ್ರೆಂಡ್ ಒಂದನ್ನು ಗಮನಿಸೋಣ.

ಭಾರತ ಯುವಜನಸಂಖ್ಯೆಯ ನಾಡು, ಯುವಶಕ್ತಿ-ಯುವವಿಚಾರವೇ ದೇಶವನ್ನು ರೂಪಿಸೋದು ಅನ್ನೋದೆಲ್ಲ ಸರಿ. ಆದರೆ ನಮ್ಮ ಮಾಧ್ಯಮ, ಅದರಲ್ಲೂ ಡಿಜಿಟಲ್ ಜಗತ್ತಿನಲ್ಲಿ, ಮಿಲೇನಿಯಲ್ ಎಂಬ ವರ್ಗ ಸೃಷ್ಟಿಸಿ ಅವರನ್ನು ಅಗತ್ಯಕ್ಕೆ ಮೀರಿ ತಲೆ ಮೇಲಿಟ್ಟು ಮೆರೆಸಲಾಗುತ್ತಿದೆ. ಅವರ ಭಾಷೆ, ಅವರ ಧಿರಿಸು, ಅವರ ತಿನಿಸು ಇವೇ ಕೂಲ್…ಅದರಾಚೆ ಇರೋರೆಲ್ಲ ಅಮುಖ್ಯರು ಎಂಬ ಮಾರ್ಕೆಟಿಂಗ್ ವಿಕೃತಿಯೊಂದು ಇಳಿವಯಸ್ಸಿನವರು ನಮ್ಮ ‘ಟಾರ್ಗೆಟ್ ಆಡಿಯೆನ್ಸ್’ ಅಲ್ಲ, ಅವರ ಬಗ್ಗೆ ಯೋಚಿಸಲೇಬೇಕಿಲ್ಲ ಎಂಬ ಧಾಟಿಯನ್ನು ಗಟ್ಟಿಯಾಗಿಸುತ್ತಿದೆ. ಹಿರಿಯರೆಂದರೆ ಬೇಡದ ವಾಟ್ಸಾಪ್ ಫಾರ್ವರ್ಡ್ ಮಾಡಿಕೊಂಡಿರುವವರು ಎಂಬುದನ್ನೇ ಬೇರೆ ಬೇರೆ ರೀತಿ ಹಂಗಿಸುವ ತಥಾಕಥಿತ ಸ್ಟ್ಯಾಂಡ್ ಅಪ್ ಕಮೆಡಿಯನ್ನುಗಳ ಮಾತುಗಳಲ್ಲಿ, ನಾವೇಕೆ ಫೇಸ್ಬುಕ್ಕಿನಲ್ಲಿಲ್ಲ ಅಂದ್ರೆ ಅಲ್ಲಿ ನಮ್ಮ ಕುಟುಂಬದ ವಯಸ್ಸಾದವರೆಲ್ಲ ಬಂದು ಕುಳ್ತಿದಾರೆ ಎಂಬ ಕುಹಕದಲ್ಲಿ ಈ ಸಾಮಾಜಿಕ ವಿಕೃತಿ ರಾರಾಜಿಸಿಕೊಂಡಿದೆ.

ಹೊಸದಾಗಿ ಆರ್ಥಿಕ ಸ್ವಾತಂತ್ರ್ಯದ ಸ್ವಾದ ಪಡೆದ ಯುವಜನರ ಒಂದು ವರ್ಗಕ್ಕೆ ಸಂಬಂಧ, ನೆಂಟರಿಷ್ಟರು, ವಿವಾಹ ಎಲ್ಲವೂ ಈ ಕ್ಷಣಕ್ಕೆ ಅಂಥ ‘ವ್ಯಾಲ್ಯೂ ಆ್ಯಡ್’ ಎನಿಸದೇ ಅವೆಲ್ಲದರಿಂದ ದೂರ. ಈಗ ಹೊಂದಿಕೊಂಡಿರುವ ಆಫೀಸಿನ ಅಥವಾ ದುಡಿಮೆಯ ರುಟೀನು ಕ್ಷೀಣವಾಗುವ ಕಾಲಕ್ಕೆ ಇವರಿಗೆಲ್ಲ ಎದುರಾಗಬಹುದಾದ ಇಳಿವಯಸ್ಸಿನ ಏಕಾಂಗಿತನ ಎಂಥದ್ದಿದ್ದಿರಬಹುದು?

ಈ ಎಲ್ಲ ಸಾಮಾಜಿಕ ಕಂಪನಗಳ ಹಿನ್ನೆಲೆಯಲ್ಲಿ ನೋಡಿದಾಗ, ಗುಡ್ ಫೆಲ್ಲೋಸ್ ಎಂಬ ನವೋದ್ದಿಮೆಗೆ ರತನ್ ಟಾಟಾ ಸಹಿ ಮಾಡಿರುವ ಚೆಕ್ ಕೇವಲ ವಹಿವಾಟಿನ ಕಾಗದದಂತೆ ಕಾಣಿಸದೇ ಭಾರತದಲ್ಲಿ ಹೇಗಾದರೂ ಅರಳಲೇಬೇಕಿರುವ ಬಾಂಧವ್ಯಗಾಥೆಯೊಂದರ ಸ್ಕ್ರಿಪ್ಟಿನಂತೆ ತೋರೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!