ಹೊಸದಿಗಂತ ವರದಿ ಮೈಸೂರು:
ಜಿಲ್ಲೆಯ ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರೆಯ ಮೂರನೇ ದಿನವಾದ ಗುರುವಾರ, ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ಶಾಂತಲಿಂಗೇಶ್ವರ ಮಠದ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಶ್ರವಣ ಬೆಳಗೊಳದ ಶ್ರೀ ಜೈನ ಮಠದ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿ, ಸುತ್ತೂರು ಮಠದ ಪೀಠಾಧಿಪತಿ ಶ್ರೀ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸುತ್ತೂರು ಶ್ರೀಗಳು ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಥದ ಹಗ್ಗವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಸುತ್ತೂರು ದೇವಾಲಯದಿಂದ ಆರಂಭವಾದ ರಥ, ಮಠದ ಗದ್ದುಗೆ ತಲುಪಿ, ಮತ್ತೆ ದೇವಾಲಯದ ಬಳಿ ಬಂದಿತು. ಶ್ರೀ ಕ್ಷೇತ್ರದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಬುಧವಾರ ದಾಂಪತ್ಯಕ್ಕೆ ಕಾಲಿಟ್ಟ ೧೧೮ ಜೋಡಿಗಳು ಸಹ, ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ಜವನ ಎಸೆದು, ತಮ್ಮ ಹೊಸ ಬಾಳು ಸದಾ ಹಸನಾಗಿರಲಿ, ಬದುಕು ಚೆನ್ನಾಗಿರುವಂತೆ ಆರ್ಶೀವದಿಸಿ ಎಂದು ಪ್ರಾರ್ಥನೆ ಸಲ್ಲಿಸಿದರು.
ರಥೋತ್ಸವದಲ್ಲಿ ಜಾನಪದ ಕಲಾತಂಡಗಳಾದ ಗೊರವರ ಕುಣಿತು, ವೀರಭದ್ರ ಕುಣಿತ, ಪಟ ಕುಣಿತ, ಸೋಮನ ಕುಣಿತ, ಕಂಸಾಳೆ, ಚಂಡೇಮೇಳ, ತಮಟೆ ವಾದನ, ಮಂಗಳವಾದ್ಯ, ಡೋಲು ಕುಣಿತ, ನಂದಿಧ್ವಜ, ಕೋಲಾಟ, ಹುಲಿ ಹುಣಿತ ಸೇರಿದಂತೆ ಅನೇಕ ಜಾನಪದ ಕಲಾತಂಡದವರು ಪ್ರದರ್ಶನ ನೀಡಿದರು. ಇದೇ ವೇಳೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರ ವೇಷ ಧರಿಸಿದ್ದ, ಎತ್ತರ ಮರಗಾಲಿನಲ್ಲಿ ನಡೆಯುತ್ತಿದ್ದ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದರು.
ರಥೋತ್ಸವದ ದೃಶ್ಯಗಳನ್ನು ಡ್ರೋನ್ ಕ್ಯಾಮರಾ ಮೂಲಕ ಸೆರೆ ಹಿಡಿಯಲಾಯಿತು. ಲಕ್ಷಾಂತರ ಮಂದಿ ಭಾಗವಹಿಸಿದ್ದು, ಎಲ್ಲರಿಗೂ ಹಬ್ಬದೂಟ ವಿತರಿಸಲಾಯಿತು.