ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಮ್ಮ ಮೆಟ್ರೋ (Bengaluru namma metro) ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ನಡುವಿನ ಗುಲಾಬಿ ಮಾರ್ಗದಲ್ಲಿ ನಡೆಸಿದ ‘ಭದ್ರಾ’ ಹೆಸರಿನ ಟನಲ್ ಬೋರಿಂಗ್ ಮೆಷಿನ್ ಕಾಮಗಾರಿ ಯಶಸ್ಸಿಯಾಗಿದೆ.
ಪ್ರಸ್ತುತ ವೆಂಕಟೇಶಪುರದಿಂದ ಕೆಜಿ ಹಳ್ಳಿಯವರೆಗೆ (ಕಾಡುಗೊಂಡನಹಳ್ಳಿ) ಬರೋಬ್ಬರಿ 1,186 ಮೀಟರ್ ಉದ್ದದ ಸುರಂಗ ಕೊರೆದು ಹೊರಬಂದಿದೆ. ಒಂದು ವರ್ಷಕ್ಕೆ ಎಂಟು ದಿನಗಳು ಬಾಕಿ ಇರುವಾಗಲೇ ಇಂದು ಟಿಬಿಎಂ ಭದ್ರ ಕಾಡುಗೊಂಡನಹಳ್ಳಿ ನಿಲ್ದಾಣದಿಂದ ಹೊರ ಬಂದಿದ್ದು, ಸ್ಥಳದಲ್ಲಿ ಮೆಟ್ರೋ ನೌಕರರು ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಬರಮಾಡಿಕೊಂಡರು.
ವೆಂಕಟೇಶಪುರದಿಂದ ಕಾಡುಗೊಂಡನಹಳ್ಳಿ ನಿಲ್ದಾಣದ ವರೆಗಿನ ಸುರಂಗ ಮಾರ್ಗ ಕೊರೆಯಲು ಟಿಬಿಎಂ ಭದ್ರ 2023ರ ಫೆಬ್ರವರಿ 16ರಂದು ಕಾಮಗಾರಿ ಆರಂಭಿಸಿತ್ತು. ಇಂದು ಅಂದರೆ ಒಂದು ವರ್ಷಕ್ಕೆ ಕೇವಲ 8 ದಿನಗಳು ಬಾಕಿ ಇರುವಾಗಲೇ ಭದ್ರ, 1,185 ಮೀಟರ್ ಸುರಂಗ ಕೊರೆದು ಆಚೆ ಬಂದಿದೆ. ಈ ಮೂಲಕ 20,992 ಮೀಟರ್ ಸುರಂಗ ಮಾರ್ಗದ ಪೈಕಿ 19,120 ಮೀಟರ್ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಂತಾಗಿದೆ.
ಹಂತ-2 ಯೋಜನೆಯ ಅಡಿಯಲ್ಲಿ ರೀಚ್-6 ಮಾರ್ಗವು ಕಾಳೇನ ಅಗ್ರಹಾರದಿಂದ ನಾಗಾವಾರದವರೆಗೆ ಒಟ್ಟು 21.26 ಕಿಲೋ ಉದ್ದವಿದೆ. ಈ ರೀಚ್- 6 ಮಾರ್ಗ 18 ನಿಲ್ದಾಣಗಳನ್ನ ಹೊಂದಿದ್ದು, ರೀಚ್-6 ಮಾರ್ಗ 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.