ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಹಾಲಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶುಕ್ರವಾರ ಬೆಳಗಿನ ಜಾವ 3.23ಕ್ಕೆ ಬಂಧಿಸಿದೆ.
ಕೋಲ್ಕತ್ತಾದ ಹೊರವಲಯದಲ್ಲಿರುವ ಸಾಲ್ಟ್ ಲೇಕ್ನಲ್ಲಿರುವ ಮಲ್ಲಿಕ್ ಅವರ ನಿವಾಸದಿಂದ ಅರೆಸ್ಟ್ ಮಾಡಲಾಗಿದೆ. ಮಲ್ಲಿಕ್, ಆಹಾರ ಸಚಿವರಾಗಿದ್ದಾಗ ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕ್ ಮತ್ತವರ ಸಹಚರರು ಸೇರಿದಂತೆ ಎಂಟು ನಿವಾಸಗಳ ಮೇಲೆ ಇಡಿ ದಾಳಿ ನಡೆಸಿತ್ತು.
ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಗುರುವಾರ ಬೆಳಗ್ಗೆ 6:30ರ ಸುಮಾರಿಗೆ ಸಾಲ್ಟ್ ಲೇಕ್ನಲ್ಲಿರುವ ಸಚಿವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಸತತ ವಿಚಾರಣೆ ಬಳಿಕ ಇಂದು ಬೆಳಗಿನ ಜಾವ ಮಲ್ಲಿಕ್ ಅವರನ್ನು ಬಂಧಿಸಲಾಗಿದೆ. ಪಡಿತರ ವಿತರಣೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪದ ಕುರಿತು ಇಡಿ ತನಿಖೆ ನಡೆಸುತ್ತಿದೆ. ಮಲ್ಲಿಕ್ ಪ್ರಸ್ತುತ ಬಂಗಾಳದ ಅರಣ್ಯ ಸಚಿವರಾಗಿದ್ದು, ಈ ಹಿಂದೆ ಅವರು ನಾಗರಿಕ ಪೂರೈಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಈ ವರ್ಷದ ಆರಂಭದಲ್ಲಿ, ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ, ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ನಿವಾಸದಿಂದ ಭಾರಿ ಹಣವನ್ನು ವಶಪಡಿಸಿಕೊಂಡ ನಂತರ ಬಂಧಿಸಿತ್ತು.