ಹೊಸದಿಗಂತ ಡಿಜಿಟಲ್ ಡೆಸ್ಕ್;
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ರೇವ್ ಪಾರ್ಟಿ ನಡೆಸಿದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದು,, ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ತೆಲುಗು ನಟಿ ಹೇಮಾ ಸೇರಿ ಒಟ್ಟು 85ಕ್ಕೂ ಹೆಚ್ಚು ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಹೇಮಾ ವಿರುದ್ಧವೂ ಸಾಕ್ಷಿಗಳಿದ್ದು, ಸಿಸಿಬಿ ಚಾರ್ಜ್ ಫ್ರೇಮ್ ಮಾಡಿದೆ.
ಡ್ರಗ್ಸ್ ಸೇವನೆ ಮಾಡಿದ್ದೂ ಅಲ್ಲದೇ ಪೊಲೀಸರ ತನಿಖೆ ವೇಳೆ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾಳೆ. ಪೊಲೀಸರಿಗೆ ತನಿಖೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾಳೆ. ಪ್ರಭಾವ ಬಳಸಿ ತನಿಖೆಯಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿರುವ ಬಗ್ಗೆಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ತಾನು ರೇವ್ ಪಾರ್ಟಿಯಲ್ಲಿ ಭಾಗವಹಿಸಿಯೇ ಇಲ್ಲ ಎಂದು ಈಕೆ ಪಾರ್ಟಿಯ ಸ್ಥಳದಿಂದಲೇ ಮಾಧ್ಯಮಗಳಿಗೆ ವಿಡಿಯೋ ಕಳಿಸಿ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದಳು.
ಪಾರ್ಟಿ ಆಯೋಜನೆ ಮಾಡಿದ್ದ ಐವರು ಸೇರಿ ಒಟ್ಟು 85ಕ್ಕೂ ಹೆಚ್ಚು ಜನರ ವಿರುದ್ಧ ಚಾರ್ಜ್‌ಶೀಟ್ ಮಂಡಿಸಲಾಗುತ್ತಿದೆ. ಇನ್ನೂ ಕೆಲವೇ ದಿನದಲ್ಲಿ ನ್ಯಾಯಾಲಯಕ್ಕೆ ಇದನ್ನು ಸಿಸಿಬಿ ಸಲ್ಲಿಕೆ ಮಾಡಲಿದೆ ಎಂದು ತಿಳಿದುಬಂದಿದೆ.
ರೇವ್ ಪಾರ್ಟಿ ಪ್ರಕರಣದಲ್ಲಿ ನಟಿ ಹೇಮಾ ಅವರನ್ನು ಬಂಧಿಸಲಾಗಿತ್ತು. 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ಕೋರ್ಟ್ ಆಕೆಗೆ ವಿಧಿಸಿತ್ತು. ನಂತರ ಜಾಮೀನು ಮಂಜೂರಾಗಿತ್ತು. ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ಕೋರ್ಟ್, ನಟಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.